ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಜಿಲ್ಲೆಯಲ್ಲಿ ‘ಹಸಿರು ಪಟಾಕಿ’ಗೆ ಅವಕಾಶ

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪರಿಸರ ಅಧಿಕಾರಿ ರಾಜಶೇಖರ್‌ ಹೇಳಿಕೆ
Last Updated 13 ನವೆಂಬರ್ 2020, 16:12 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ‘ಹಸಿರು ಪಟಾಕಿ’ಯ ಬಳಕೆ ಹಾಗೂ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇತರೆ ಪಟಾಕಿಗಳ ಬಳಕೆ ಮತ್ತು ಮಾರಾಟ ನಿಷೇಧಿಸಲಾಗಿದೆ’ ಎಂದು ಜಿಲ್ಲಾ ಪರಿಸರ ಅಧಿಕಾರಿ ಎಸ್.ರಾಜಶೇಖರ್‌ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವ್ಯಾಪಾರಿಗಳು ಸಂಬಂಧಪಟ್ಟ ಇಲಾಖೆ ಮತ್ತು ಪ್ರಾಧಿಕಾರದಿಂದ ಅಧಿಕೃತ ಪರವಾನಗಿ ಪಡೆದು ಹಸಿರು ಪಟಾಕಿಗಳನ್ನು ಮಾತ್ರ ಮಾರಬೇಕು. ನ.16ವರೆಗೆ ಮಾತ್ರ ಹಸಿರು ಪಟಾಕಿ ವಹಿವಾಟು ನಡೆಸಬೇಕು. ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಹಸಿರು ಪಟಾಕಿಗಳ ಬಾಕ್ಸ್‌ ಮೇಲೆ ರಾಷ್ಟ್ರೀಯ ಪರಿಸರ ಮತ್ತು ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ (ನೀರಿ) ನೋಂದಣಿ ಹೊಂದಿರುವ ಹಸಿರು ಲೋಗೊ ಇರುತ್ತದೆ. ಜತೆಗೆ ಕ್ಯೂಆರ್‌ ಕೋಡ್‌ ಸಹ ನಮೂದಿಸಲಾಗಿರುತ್ತದೆ. ಈ ಪಟಾಕಿಗಳಲ್ಲಿ ಹಾನಿಕಾರಕ ರಾಸಾಯನಿಕಗಳನ್ನು ಬಳಸಿರುವುದಿಲ್ಲ. ವಾಯುಮಾಲಿನ್ಯ ಪ್ರಮಾಣ ಕಡಿಮೆಯಿರುತ್ತದೆ. ಹಸಿರು ಪಟಾಕಿಗಳು ಸಾಂಪ್ರಾದಾಯಿಕ ಪಟಾಕಿಗಳಿಗೆ ಹೊಲಿಸಿದರೆ ಕಡಿಮೆ ಹಾನಿಕಾರಕವಾಗಿರುತ್ತವೆ’ ಎಂದು ವಿವರಿಸಿದರು.

‘ಹಸಿರು ಪಟಾಕಿಗಳ ಶಬ್ಧವು 125 ಡೆಸಿಬಲ್‌ಗಿಂತ ಕಡಿಮೆ ಇರುತ್ತದೆ. ವರ್ಷದಿಂದ ವರ್ಷಕ್ಕೆ ಪಟಾಕಿ ಬಳಕೆ ಶೇ 30ರಷ್ಟು ಕಡಿಮೆಯಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ದೀಪಾವಳಿ ಹಬ್ಬವನ್ನು ಸರಳವಾಗಿ ಆಚರಿಸಬೇಕು’ ಎಂದು ಮನವಿ ಮಾಡಿದರು.

ದುಷ್ಪರಿಣಾಮ: ‘ಕೋವಿಡ್- ಲಸಿಕೆ ಬರುವವರೆಗೂ ಜನರು ಎಚ್ಚರಿಕೆಯಿಂದ ಇರಬೇಕು. ಸಾಂಪ್ರದಾಯಿಕ ಪಟಾಕಿ ಸಿಡಿಸಿದರೆ ಕೊರೊನಾ ಸೋಂಕಿನಿಂದ ಗುಣಮುಖರಾದವರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಹಸಿರು ಪಟಾಕಿ ಬಳಸಬೇಕು. ಪಟಾಕಿ ಬಳಸದೆಯೂ ಸರಳವಾಗಿ ದೀಪಾವಳಿ ಹಬ್ಬ ಆಚರಿಸುವುದು ಒಳ್ಳೆಯದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಸಲಹೆ ನೀಡಿದರು.

‘ಜಿಲ್ಲಾ ಕೇಂದ್ರದ ಜೂನಿಯರ್ ಕಾಲೇಜು ಆವರಣದಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸೇಷನ್ ಮಾಡಬೇಕು. ಪಟಾಕಿ ಖರೀದಿಗೆ ಬರುವ ಗ್ರಾಹಕರಿಗೆ ಸ್ಯಾನಿಟೈಸರ್ ನೀಡಬೇಕು ಹಾಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಗ್ರಾಹಕರು ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ವ್ಯಾಪಾರಿಗಳು ಮತ್ತು ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು’ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT