ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳ ನಿರ್ಮಾಣಕ್ಕೆ ವಿರೋಧ

ಶ್ರೀನಿವಾಸಪುರ ಪುರಸಭೆ ಸದಸ್ಯರ ವಿಶೇಷ ಸಭೆ
Last Updated 16 ಫೆಬ್ರುವರಿ 2023, 5:40 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಅಭಿವೃದ್ಧಿಗೆ ಸರ್ಕಾರ ನೀಡಿರುವ ₹15 ಕೋಟಿ ವಿಶೇಷ ಅನುದಾನದಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸಲು ಬುಧವಾರ ಪುರಸಭೆ ಸದಸ್ಯರ ವಿಶೇಷ ಸಭೆ ನಡೆಯಿತು.

ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಪಟ್ಟಣದ ಹೊಸ ಬಡಾವಣೆಗಳಾದ ಉನಿಕಿಲಿ, ನಲ್ಲಪಲ್ಲಿ, ಕೊಳ್ಳೂರು ಹಾಗೂ ಬೈರಪ್ಪಲ್ಲಿ ಸೇರಿದಂತೆ ಎಲ್ಲಾ 24 ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಹೇಳಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ₹3 ಕೋಟಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸಬೇಕೆಂದು ಶಾಸಕರು ಹೇಳಿದಾಗ, ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಅವರು ವಿರೋಧ
ವ್ಯಕ್ತಪಡಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಅಷ್ಟು ಹಣ ಖರ್ಚು ಮಾಡಿ ಈಜುಕೊಳ ನಿರ್ಮಿಸುವುದು ಬೇಡ. ಅದಕ್ಕೆ ಬದಲಾಗಿ ಪಟ್ಟಣದಲ್ಲಿ ಬೀದಿ ದೀಪ ಅಳವಡಿಸಲು, ಸ್ವಚ್ಛತೆ ಕಾಪಾಡಲು, ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲು, ರಸ್ತೆ, ಚರಂಡಿ ದುರಸ್ತಿ ಮಾಡಲು ಬಳಸಿಕೊಳ್ಳೋಣ’ ಎಂದು ಸಲಹೆ ನೀಡಿದರು.‌

ಸದಸ್ಯರ ಅವಗಣನೆ ಬೇಡ

ಪುರಸಭಾಧ್ಯಕ್ಷರು ಪಕ್ಷಾತೀತವಾಗಿ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿ ಮಾಡಬೇಕು. ಯಾವುದೇ ಕಾರಣಕ್ಕೂ ಸದಸ್ಯರ ಅವಗಣನೆ ಮಾಡಬಾರದು ಎಂದು ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ನೀಡಿದರು.

ಪುರಸಭೆ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸಹಕರಿಸಬೇಕು. ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.

ಇದಕ್ಕೆ ಪತ್ರಿಕ್ರಿಯಿಸಿದ ರಮೇಶ್ ಕುಮಾರ್, ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲಿ ಪುರಸಭೆ ಅಥವಾ ನಗರಸಭೆಗೆ ಸೇರಿದ ಈಜುಕೊಳ ಇಲ್ಲ. ಸಮಗ್ರ ಅಭಿವೃದ್ಧಿ ಯೋಜನೆಯಲ್ಲಿ ಈಜುಕೊಳವೂ ಸೇರುತ್ತದೆ. ವಿರೋಧ ವ್ಯಕ್ತಪಡಿಸುವುದು ಬೇಡ. ಪ್ರಸ್ತಾವನೆ ಜಿಲ್ಲಾಧಿಕಾರಿಗೆ ಕಳುಹಿಸಿ, ಅವರು ಪ್ರಸ್ತಾವನೆ ಪರಿಶೀಲಿಸಿ ಒಪ್ಪಿಗೆ ಸೂಚಿಸಿದಲ್ಲಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಪಟ್ಟಣದ ಅಭಿವೃದ್ಧಿಗೆ ಪಕ್ಷಾತೀತವಾಗಿ ಸೌಲಭ್ಯ ಕಲ್ಪಿಸಲಾಗಿದೆ. ಎರಡನೇ ಹಂತದ ಒಳಚರಂಡಿ ಯೋಜನೆ
ಜಾರಿಗೊಳಿಸಲಾಗಿದೆ. ಇಂದಿರಾ ನಗರ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಪಟ್ಟಣ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಕುಡಿಯುವ ನೀರು, ಸ್ವಚ್ಛತೆ ಮತ್ತಿತರ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ
ನೀಡಬೇಕು. ಸದಸ್ಯರಿಗೆ ಅನುಭವದ ಕೊರತೆ ಇದೆ. ಲಭ್ಯವಿರುವ ಸಂಪನ್ಮೂಲ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ 13 ಸದಸ್ಯರು ಕೈ ಎತ್ತುವುದರ ಮೂಲಕ ಪುರಸಭೆ ಕೈಗೊಂಡ ನಿರ್ಣಯಕ್ಕೆ ಬೆಂಬಲ ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಎಂಜಿನಿಯರ್ ನಾಗರಾಜ್, ಕಂದಾಯ ಅಧಿಕಾರಿ ವಿ.ನಾಗರಾಜ್ ಮತ್ತು ಸದಸ್ಯರು ಇದ್ದರು.

ಅಭಿವೃದ್ಧಿ ಕುಂಠಿತ

ವಿರೋಧಗಳ ನಡುವೆ ಅಭಿವೃಧ್ದಿ ಕುಂಠಿತಗೊಳ್ಳುತ್ತಿದೆ. ಹಳೆ ಬಸ್ ನಿಲ್ದಾಣದಲ್ಲಿ ರವೀಂದ್ರ ಕಲಾಕ್ಷೇತ್ರ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವರು ಅದಕ್ಕೂ ವಿರೋಧ ವ್ಯಕ್ತಪಡಿಸುತ್ತಾರೆ. ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 400 ವಿದ್ಯಾರ್ಥಿಗಳು ದಾಖಲಾಗಿದ್ದು, ಕಟ್ಟಡ ಹಾಗೂ ಮೂಲ ಸೌಕರ್ಯದ ಕೊರತೆ ಇದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಂಥ ಮಾದರಿ ಶಾಲಾಭಿವೃದ್ಧಿಗೆ ಎಲ್ಲರು ಸಹಕರಿಸಬೇಕು ಎಂದು ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT