ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಹಿಂದಿ ದಿವಸ್ ಆಚರಣೆಗೆ ವಿರೋಧ

ಕೇಂದ್ರದ ಸಂವಿಧಾನ ವಿರೋಧಿ ಕ್ರಮ: ಜಯ ಕರ್ನಾಟಕ ಸಂಘಟನೆ ಸದಸ್ಯರ ಅಸಮಾಧಾನ
Last Updated 14 ಸೆಪ್ಟೆಂಬರ್ 2021, 15:28 IST
ಅಕ್ಷರ ಗಾತ್ರ

ಕೋಲಾರ: ಬ್ಯಾಂಕಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ ವಿರೋಧಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಇಲ್ಲಿ ಮಂಗಳವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಮನವಿ ಸಲ್ಲಿಸಿದರು.

‘ಕೇಂದ್ರ ಸರ್ಕಾರವು ಪ್ರತಿವರ್ಷ ಸೆ.14ರಂದು ಜನರ ತೆರಿಗೆ ಹಣದಲ್ಲಿ ಹಿಂದಿ ದಿವಸ್‌ ಆಚರಣೆ ಮಾಡುತ್ತಿದೆ. ದೇಶದ ಎಲ್ಲಾ ಭಾಷೆಗಳನ್ನು ಕಡೆಗಣಿಸಿ ಕೇವಲ ಹಿಂದಿ ಭಾಷೆ ಆಚರಣೆ ಮಾಡುತ್ತಿದೆ. ಸರ್ಕಾರದ ಈ ಹಿಂದಿ ಹೇರಿಕೆ ನೀತಿ ಸರಿಯಲ್ಲ’ ಎಂದು ಸಂಘಟನೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

‘ಭಾರತವು ಒಕ್ಕೂಟ ಸಿದ್ಧಾಂತರ ಮೇಲೆ ರಚನೆಯಾಗಿರುವ ದೇಶವಾಗಿದ್ದು, ಇಲ್ಲಿ ಎಲ್ಲಾ ಧರ್ಮ ಹಾಗೂ ರಾಜ್ಯಗಳ ಭಾಷೆಗಳನ್ನು ಸಮನಾಗಿ ಕಾಣಬೇಕು. ಆದರೆ, ಕೇಂದ್ರ ಸರ್ಕಾರವು ಇತರೆ ಭಾಷಿಕ ರಾಜ್ಯಗಳಲ್ಲಿ ಹಿಂದಿಯನ್ನು ಆಡಳಿತ ಭಾಷೆಯಾಗಿ ಏರುವ ಪ್ರಯತ್ನ ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ಕ್ರಮ’ ಎಂದು ಸಂಘನೆಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಆರ್.ತ್ಯಾಗರಾಜ್ ಟೀಕಿಸಿದರು.

‘ಸಂವಿಧಾನವು ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆಯಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರವು ದೇಶದ 22 ಭಾಷೆಗಳಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿದೆ. ಈ ಪೈಕಿ ಕನ್ನಡ ಮತ್ತು ಹಿಂದಿ ಭಾಷೆ ಸಹ ಸೇರಿವೆ. ಆದರೆ, ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ಉಲ್ಲೇಖ ಮಾಡಿಲ್ಲ’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹಿಂದಿ ಭಾಷೆ ಮೇಲಿನ ವ್ಯಾಮೋಹದಿಂದ ರಾಷ್ಟ್ರದ ಎಲ್ಲಾ ರಾಜ್ಯಗಳ ಮೇಲೂ ಹಿಂದಿ ಭಾಷೆ ಹೇರುತ್ತಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾಡಿರುವ ಮೋಸ. ಕೇಂದ್ರದ ಈ ನಡೆ ರಾಜ್ಯಗಳ ಸಾರ್ವಭೌಮತ್ವ ಪ್ರಶ್ನಿಸುವಂತಿದ್ದು, ಸಂವಿಧಾನದಲ್ಲೇ ಇಲ್ಲದ ವಿಷಯಗಳನ್ನು ಸರ್ಕಾರ ಜನರ ಮೇಲೆ ಹೇರುತ್ತಿರುವುದು ಅಸಂವಿಧಾನಿಕ’ ಎಂದು ಗುಡುಗಿದರು.

ಸಾರ್ವಭೌಮತ್ವ: ‘ಕೇಂದ್ರವು ಭಾಷೆ ವಿಚಾರವಾಗಿ ದೇಶದಲ್ಲಿ ಶಾಂತಿ ಕದಡುವ ಮತ್ತು ಭಾಷಾ ಸಾಮರಸ್ಯ ಹಾಳು ಮಾಡುವ ಸಂಚು ನಡೆಸುತ್ತಿದೆ. ಅಖಂಡ ಭಾರತದ ಕನಸು ನುಚ್ಚು ನೂರಾಗುವ ಆತಂಕ ಕಾಡುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿರುವ ಹಿಂದಿ ದಿವಸ್ ಆಚರಣೆಗೆ ಬೆಂಬಲ ನೀಡದೆ, ಹಿಂದಿಯನ್ನು ಕನ್ನಡಿಗರ ಮೇಲೆ ಹೇರಬೇಕೆಂಬ ನಿಲುವನ್ನು ದೂರವಿಟ್ಟು ಕನ್ನಡಿಗರ ಸಾರ್ವಭೌಮತ್ವ ಎತ್ತಿ ಹಿಡಿಯಬೇಕು’ ಎಂದು ಸಂಘಟನೆ ಸದಸ್ಯರು ಕೋರಿದರು.

ಸಂಘಟನೆ ಜಿಲ್ಲಾ ಘಟಕದ ಸಂಚಾಲಕರಾದ ಕೆ.ಎನ್.ಪ್ರಕಾಶ್, ವಿ.ಜಗದೀಶ್, ಸಂಘಟನಾ ಕಾರ್ಯದರ್ಶಿ ಕೆ.ಅಮರನಾಥ್‌ಸ್ವಾಮಿ, ಸದಸ್ಯರಾದ ರಾಜಣ್ಣ, ನರೇಂದ್ರಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT