ಶನಿವಾರ, ಜನವರಿ 29, 2022
23 °C
ವಾಣಿಜ್ಯೀಕರಣ ಅಂಶ ಒಳಗೊಂಡಿದೆ: ಅಂಗನವಾಡಿ ನೌಕರರ ಆಕ್ರೋಶ

ಎನ್‌ಇಪಿ ಜಾರಿಗೆ ವಿರೋಧ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ವಿರೋಧಿಸಿ ಅಂಗನವಾಡಿ ನೌಕರರ ಸಂಘದ ಸದಸ್ಯರು ಇಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ರಾಜ್ಯದಲ್ಲಿ ಎನ್ಇಪಿ ಜಾರಿಯಾದರೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ. ಅಂಗನವಾಡಿಗಳಿಗೆ ಅನುದಾನ ಸಹ ಬಿಡುಗಡೆ ಮಾಡಿಲ್ಲ. ಸರ್ಕಾರದ ಎಲ್ಲಾ ಕೆಲಸಗಳಿಗೆ ಅಂಗನವಾಡಿ ನೌಕರರು ಬೇಕು. ಆದರೆ, ನೌಕರರಿಗೆ ಯಾವುದೇ ಸೌಕರ್ಯ ಒದಗಿಸಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರವು ಅಂಗನವಾಡಿಗಳ ನಿರ್ವಹಣೆ ಜವಾಬ್ದಾರಿಯನ್ನು ಗ್ರಾ.ಪಂಗಳಿಗೆ ವಹಿಸಲು ಮುಂದಾಗಿದೆ. ದೇಶದಲ್ಲಿ ಎನ್‌ಇಪಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಪೂರಕವಾಗಿಲ್ಲ. ಆಳುವ ಸರ್ಕಾರಗಳು ಅಂಗನವಾಡಿಗಳ ಉಳಿವಿನತ್ತ ಗಮನ ಹರಿಸುತ್ತಿಲ್ಲ’ ಎಂದು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ದೂರಿದರು.

‘ಕೋವಿಡ್ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎನ್‌ಇಪಿ ಜಾರಿಗೆ ತಂದಿದೆ. ರಾಜ್ಯದಲ್ಲಿ ಎನ್‌ಇಪಿ ಜಾರಿ ವಿಚಾರವಾಗಿ ಸರ್ಕಾರ ಸಂಘಟನೆಗಳ ಜತೆ ಚರ್ಚಿಸಿಲ್ಲ. ಎನ್‍ಇಪಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣ ಅಂಶಗಳನ್ನು ಒಳಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ಎಲ್‌ಕೆಜಿ ಮತ್ತು ಯುಕೆಜಿ ತೆರೆದಿದ್ದರಿಂದ ಅಂಗನವಾಡಿ ಮಕ್ಕಳನ್ನು ಅಲ್ಲಿ ದಾಖಲಿಸಿದ ಕಾರಣ ಅಂಗನವಾಡಿಗಳಲ್ಲಿ ದಾಖಲಾತಿ ಕುಸಿಯುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಐಸಿಡಿಎಸ್ ಯೋಜನೆಯಲ್ಲಿ ಕೇವಲ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳವರೆಗಿನ ಮಕ್ಕಳು ಅಂಗನವಾಡಿಗೆ ದಾಖಲಾಗುತ್ತಿದ್ದರು. 5 ವರ್ಷ ತುಂಬುವುದಕ್ಕೂ ಮೊದಲು ಎನ್‍ಇಪಿ ಪ್ರಕಾರ ಮಕ್ಕಳಿಗೆ ಬಾಲವಾಟಿಕಾ ಎಂಬ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಮಾತ್ರ ಇರುತ್ತಾರೆ. ಅಂಗನವಾಡಿಗಳಲ್ಲಿ ಮುಂದೆ ಮಕ್ಕಳೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಬಹುದು’ ಎಂದರು.

ನೌಕರರಿಗೆ ಸಂಕಷ್ಟ: ‘ಬಾಲವಟಿಕಾ ಎಂಬ ಶಿಶುಪಾಲನಾ ಕೇಂದ್ರದಿಂದ ಅಂಗನವಾಡಿ ನೌಕರರಿಗೆ ಸಂಕಷ್ಟ ಎದುರಾಗುತ್ತದೆ. ನೌಕರರು ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಗಳು ಬೀದಿ ಪಾಲಾಗುತ್ತವೆ. ಎನ್‌ಇಪಿ ಜಾರಿಗೆ ಬಂದರೆ ಅಂಗನವಾಡಿಗೆ ಸೇರುವ ಮಕ್ಕಳ ಸಂಖ್ಯೆ ಸಂಪೂರ್ಣ ಕಡಿಮೆಯಾಗುತ್ತದೆ’ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.

‘3 ವರ್ಷದೊಳಗಿನ ಮಕ್ಕಳು ಶಿಶುಪಾಲನಾ ಕೇಂದ್ರಕ್ಕೆ, 3ರಿಂದ 6 ವರ್ಷದೊಳಗಿನ ಮಕ್ಕಳು ಅಂಗನವಾಡಿಗೆ, 6ನೇ ವರ್ಷದ ಮಕ್ಕಳು 1ನೇ ತರಗತಿಗೆ ಸೇರಬೇಕು. 6 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಲು ಪ್ರತ್ಯೇಕ ಕಾಯ್ದೆ ರೂಪಿಸಬೇಕು. ಅಂಗನವಾಡಿ ಕೇಂದ್ರಗಳನ್ನು ಗ್ರಾ.ಪಂ ಹಿಡಿತಕ್ಕೆ ನೀಡುವ ಆದೇಶ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

‘ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು. ಅಂಗನವಾಡಿ ನೌಕರರನ್ನು ಐಸಿಡಿಎಸ್‌ ಸೇವೆಗಳಿಗೆ ಮಾತ್ರ ಸೀಮಿತಗೊಳಿಸಬೇಕು ಮತ್ತು ಸೇವಾ ಭದ್ರತೆ ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ನೌಕರರಿಗೆ ತರಬೇತಿ ನೀಡಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು. ಹೆಚ್ಚುವರಿ ಸಹಾಯಕಿಯರನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವಿಜಯಕೃಷ್ಣ, ತಾಲ್ಲೂಕು ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಮಂಜುಳಾ, ಖಜಾಂಚಿ ಲಕ್ಷ್ಮೀದೇವಿ, ಸದಸ್ಯರಾದ ರಾಜಮ್ಮ, ಜಯಲಕ್ಷ್ಮೀ ಉಮಾ, ಗೌರಮ್ಮ, ನಾಗರತ್ನ, ಲೋಕೇಶ್ವರಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು