ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶುಭಾಗ್ಯ ಯೋಜನೆ ತಾತ್ಕಾಲಿಕ ಸ್ಥಗಿತ

Last Updated 7 ಜುಲೈ 2020, 14:35 IST
ಅಕ್ಷರ ಗಾತ್ರ

ಕೋಲಾರ: ‘ಪಶುಭಾಗ್ಯ ಯೋಜನೆಯಲ್ಲಿ ಸೌಲಭ್ಯ ಸಮರ್ಪಕವಾಗಿ ವಿತರಣೆಯಾಗದ ಕಾರಣ ತಾತ್ಕಾಲಿಕವಾಗಿ ಯೋಜನೆ ಸ್ಥಗಿತಗೊಳಿಸಲಾಗಿದೆ. ಮುಂದೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಮೂಲಕ ಸೌಲಭ್ಯ ಕಲ್ಪಿಸುತ್ತೇವೆ’ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಭರವಸೆ ನೀಡಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಖಾಲಿ ಹುದ್ದೆ ಭರ್ತಿ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕೊಂಚ ತಡವಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ಪಶು ಆಹಾರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಈ ಅಕ್ರಮಕ್ಕೆ ಕಡಿವಾಣ ಹಾಕುತ್ತೇವೆ. ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುತ್ತೇವೆ. ಪಶು ಇಲಾಖೆ ಆಂಬುಲೆನ್ಸ್‌ಗಳನ್ನು ಉಪಕರಣ ಸಮೇತ ಪ್ರಾಯೋಗಿಕವಾಗಿ 15 ಜಿಲ್ಲೆಗಳಿಗೆ ನೀಡಲಾಗುತ್ತಿದ್ದು, ಸಿಬ್ಬಂದಿಗೆ ಹಳ್ಳಿಗಳಿಗೆ ತೆರಳಿ ರಾಸುಗಳಿಗೆ ಚಿಕಿತ್ಸೆ ನೀಡುತ್ತಾರೆ’ ಎಂದು ವಿವರಿಸಿದರು.

‘ಈಗಾಗಲೇ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಆರಂಭಿಸಲಾಗಿದ್ದು, ಪಶು ಮೇಳ ಮಾಡಿದ್ದೇವೆ. ಹಸುಗಳು ಯಾವುದೇ ಕಾರಣಕ್ಕೂ ಕಸಾಯಿ ಖಾನೆಗೆ ಹೋಗಬಾರದು. ಗೋಮಾತೆ ರಕ್ಷಣೆಯಾಗಬೇಕು. ವೈದ್ಯರು ಪ್ರತಿ ಗ್ರಾಮಕ್ಕೆ ತೆರಳಿ ರೈತರ ಸಮಸ್ಯೆಗೆ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

ವಿಪಕ್ಷದವರಿಗೆ ಕೆಲಸವಿಲ್ಲ: ‘ಕೋವಿಡ್‌–19ಗೆ ಸಂಬಂಧಿಸಿದ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಆರೋಪ ಮಾಡುತ್ತಿದ್ದಾರೆ. ಕೊರೊನಾ ಸೋಂಕಿನ ವಿಚಾರವಾಗಿ ಪಕ್ಷದಲ್ಲಿ ಗೊಂದಲವಿಲ್ಲ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮತ್ತೆ ಲಾಕ್‌ಡೌನ್ ಮಾಡುವುದಿಲ್ಲ’ ಎಂದು ಹೇಳಿದರು.

‘ದಿನೇದಿನೇ ಕೊರೊನಾ ಸೋಂಕು ಹೆಚ್ಚುತ್ತಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರಿಗೆ ಸೋಂಕಿನ ಗಂಭೀರತೆಯ ಅರಿವಿಲ್ಲ. ಜನ ಸಹಕಾರ ನೀಡಿದರೆ ಕೊರೊನಾ ಸೋಂಕಿನ ನಿಯಂತ್ರಣ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT