ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ಕ್ಕೆ ಶಾಂತಿ– ಸೌಹಾರ್ದತೆ ಸಮಾವೇಶ

ಪತ್ರಿಕಾಗೋಷ್ಠಿಯಲ್ಲಿ ಪ್ರಕ್ರಿಯೆ ಸಂಸ್ಥೆ ಅಧ್ಯಕ್ಷ ಮುನಿಯಪ್ಪ ಹೇಳಿಕೆ
Last Updated 11 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಕೋಲಾರ: ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಕೇಂದ್ರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಾರ್ಚ್‌ 14ರಂದು ಮಹಿಳೆ- ಶಾಂತಿ ಮತ್ತು ಸೌಹಾರ್ದತೆ ಪ್ರತಿನಿಧಿ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಕ್ರಿಯೆ ಸಂಸ್ಥೆ ಅಧ್ಯಕ್ಷ ಮುನಿಯಪ್ಪ ತಿಳಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮಾರ್ಚ್‌ 14ರಂದು ಜಿಲ್ಲಾ ಕೇಂದ್ರದ ಪ್ರವಾಸಿ ಮಂದಿರದಿಂದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತೇವೆ’ ಎಂದರು.

‘ಸಂಸ್ಥೆಯು ಜಿಲ್ಲೆಯ 21 ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಜಾತಿ ಧರ್ಮಗಳಲ್ಲಿ ಸಹಬಾಳ್ವೆಯ ಜೀವನ, ಶಾಂತಿ ಮತ್ತು ಸಾಮರಸ್ಯದ ಅರಿವಿನ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಆಧುನಿಕ ಯುಗದಲ್ಲೂ ಕೋಮುಗಲಭೆ ಸೃಷ್ಟಿಸಿ ಶಾಂತಿ, ಸೌಹಾರ್ದತೆಗೆ ಧಕ್ಕೆ ಉಂಟು ಮಾಡಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮಾನಸಿಕ ಒತ್ತಡದಿಂದ ಜೀವನ ನಿಯಂತ್ರಿಸಿಕೊಳ್ಳುವಲ್ಲಿ ವಿಫಲವಾಗಿರುವ ಮಕ್ಕಳಲ್ಲಿ ಸೌಹಾರ್ದತೆಯ ಅರಿವು ಮೂಡಿಸಬೇಕು. ಲಿಂಗ ತಾರತಮ್ಯದ ವಿರುದ್ಧ ಮತ್ತು ಸಾಮಾಜಿಕ ಹಕ್ಕುಗಳ ರಕ್ಷಣೆಗೆ ಹೋರಾಟ ನಡೆಸಬೇಕು’ ಎಂದು ಅಭಿಪ್ರಾಯಪಟ್ಟರು.

ಮಹಿಳೆಯರ ಮೇಲುಗೈ: ‘ನವ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಕೃಷಿಯಿಂದ ಕೈಗಾರಿಕೆ, ಶಿಕ್ಷಣದಿಂದ ಸಂಶೋಧನೆವರೆಗೆ ನವ ಭಾರತದಲ್ಲಿ ಮಹಿಳೆಯರು ತಮ್ಮದೆ ಹೆಜ್ಜೆ ಗುರುತು ಮೋಡಿಸಿದ್ದಾರೆ’ ಎಂದು ಸಂಸ್ಥೆಯ ಜಿಲ್ಲಾ ಘಟಕದ ಸಂಚಾಲಕ ಮುನಿವೆಂಕಟಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

‘ಮಹಿಳೆಯರು ಸಮಾಜದಲ್ಲಿ ಕೇವಲ ಮನೆಗೆಲಸಕ್ಕೆ ಸೀಮಿತವಾಗದೆ ಉನ್ನತ ಸ್ಥಾನ ಆಲಂಕರಿಸಿ ಉತ್ತಮವಾಗಿ ಆಡಳಿತ ನಿಭಾಯಿಸುವ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಆದರೆ, ಹೆಣ್ಣಿನ ಮೇಲೆ ಶೋಷಣೆ, ದಬ್ಬಾಳಿಕೆ, ಅತ್ಯಾಚಾರ ನಡೆಯುತ್ತಿದೆ. ವರದಕ್ಷಿಣೆ ಪಿಡುಗು, ಮಾನಸಿಕ ಮತ್ತು ದೈಹಿಕ ಕಿರುಕುಳ ವ್ಯಾಪಕವಾಗಿದೆ. ಮಹಿಳೆಯರು ಎಚ್ಚೆತ್ತು ತಮ್ಮ ಹಕ್ಕು ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಆರೋಗ್ಯ ಇಲಾಖೆ ಶಿಕ್ಷಣಾಧಿಕಾರಿ ಡಾ.ವಿಜಯಮ್ಮ ಹಾಗೂ ಅನೇಕ ಗಣ್ಯರು ಸಮಾವೇಶದಲ್ಲಿ ಭಾಗವಹಿಸುತ್ತಾರೆ’ ಎಂದು ವಿವರಿಸಿದರು.

ಕಾರ್ಯಾಗಾರ: ‘ಸಂಸ್ಥೆಯು ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾ.ಪಂ ಸದಸ್ಯರು ಸೇರಿದಂತೆ ಯುವ ಸಂಘಟನೆಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸಿಕೊಂಡಿದೆ. ಸಮಾಜದಲ್ಲಿ ಜಾತಿ ಧರ್ಮದ ಸಂಘರ್ಷಕ್ಕೆ ಅವಕಾಶ ಇಲ್ಲದಂತೆ ಸಹಬಾಳ್ವೆ ನಡೆಸುವ ನಿಟ್ಟಿನಲ್ಲಿ ‘ಶಾಂತಿ -ಸಾಮರಸ್ಯದಲ್ಲಿ ಮಹಿಳೆಯರ ಪಾತ್ರ’ ಕುರಿತು ಸಮಾವೇಶದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಜಿಲ್ಲಾ ಘಟಕದ ಸಂಯೋಜಕ ನರಸಿಂಹಮೂರ್ತಿ ಮಾಹಿತಿ ನೀಡಿದರು.

ಸಂಸ್ಥೆ ಪದಾಧಿಕಾರಿಗಳಾದ ವಿಜಯಕುಮಾರ್, ರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT