ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಚೆಕ್‌ಡ್ಯಾಂ ಒಡೆಯಲು ರೈತರ ವಿರೋಧ: ಅಧಿಕಾರಿಗಳ ಜತೆ ಮಾತಿನ ಚಕಮಕಿ

ಬಿಡುವಿನ ವಾತಾವರಣ
Last Updated 16 ಮೇ 2020, 13:37 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ವೀರಾಪುರ ಸಮೀಪ ಕೆ.ಸಿ ವ್ಯಾಲಿ ಯೋಜನೆ ವ್ಯಾಪ್ತಿಯ ಕಾಲುವೆ ಮಾರ್ಗದಲ್ಲಿನ ಚೆಕ್‌ಡ್ಯಾಂ ಒಡೆಯಲು ಮುಂದಾದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸುತ್ತಮುತ್ತಲ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಸ್ಥಳದಲ್ಲಿ ಶನಿವಾರ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ವೀರಾಪುರ ಬಳಿಯ ಅಗ್ರಹಾರ ಕೆರೆಗೆ ಕೆ.ಸಿ ವ್ಯಾಲಿ ನೀರು ಹರಿದು ಬರುತ್ತಿದ್ದು, ಈಗಾಗಲೇ ಚೆಕ್‌ಡ್ಯಾಂ ಭರ್ತಿಯಾಗಿ ನೀರು ಮುಂದೆ ಹೋಗುತ್ತಿದೆ. ಆದರೆ, ನೀರು ಹರಿವಿನ ಪ್ರಮಾಣ ಕಡಿಮೆಯಿದೆ. ಹೀಗಾಗಿ ಅಧಿಕಾರಿಗಳು ಚೆಕ್‌ಡ್ಯಾಂ ಒಡೆದು ಎತ್ತರ ತಗ್ಗಿಸಲು ಪೊಲೀಸ್‌ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದಿದ್ದರು.

ಈ ವಿಷಯ ತಿಳಿದ ವೀರಾಪುರ, ಸೀತಿ, ಚೆಂಜಿಮಲೆ, ಹುಲ್ಲಂಕಲ್ಲು, ರಾಜಕಲ್ಲಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳ 150ಕ್ಕೂ ಹೆಚ್ಚು ರೈತರು ಅಧಿಕಾರಿಗಳಿಗೆ ಪ್ರತಿರೋಧ ತೋರಿ ಚೆಕ್‌ಡ್ಯಾಂ ಒಡೆಯದಂತೆ ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

‘ಬೇಸಿಗೆ ಕಾರಣಕ್ಕೆ ಹಾಗೂ ಬೆಂಗಳೂರಿನಿಂದ ಜಿಲ್ಲೆಗೆ ಹರಿದು ಬರುವ ಕೆ.ಸಿ ವ್ಯಾಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಅಗ್ರಹಾರ ಕೆರೆಯಿಂದ ಮುಂದಿನ ಕೆರೆಗೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ. ಚೆಕ್‌ಡ್ಯಾಂಗಳು ಅವೈಜ್ಞಾನಿಕವಾಗಿದ್ದು, ಎತ್ತರ ತಗ್ಗಿಸಿದರೆ ನೀರು ಮುಂದಕ್ಕೆ ಸರಾಗವಾಗಿ ಹರಿಯುತ್ತದೆ’ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು.

ವಿರೋಧವಿಲ್ಲ: ‘ಮುಂದಿನ ಕೆರೆಗಳಿಗೆ ಕೆ.ಸಿ ವ್ಯಾಲಿ ನೀರು ಹರಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆ ಭಾಗದವರು ರೈತರೇ. ಈಗಾಗಲೇ ಚೆಕ್‌ಡ್ಯಾಂ ಭರ್ತಿಯಾಗಿ ಹಲವು ತಿಂಗಳಿಂದ ಮುಂದಿನ ಕೆರೆಗೆ ನೀರು ಹರಿಯುತ್ತಿದೆ. ಆದರೂ ಚೆಕ್‌ಡ್ಯಾಂ ಒಡೆದು ನೀರನ್ನು ಸಂಪೂರ್ಣವಾಗಿ ಹೊರಗೆ ಹರಿಸಿದರೆ ಈ ಭಾಗದಲ್ಲಿ ಅಂತರ್ಜಲ ವೃದ್ಧಿಗೆ ಸಮಸ್ಯೆಯಾಗುತ್ತದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆ ನೀರು ಶೇಖರಣೆಗಾಗಿ ಜಿ.ಪಂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿದೆ. ನರೇಗಾ, ಸಣ್ಣ ನೀರಾವರಿ ಇಲಾಖೆ, ಸಂಸದರು ಮತ್ತು ಶಾಸಕರ ಅನುದಾನವನ್ನು ಚೆಕ್‌ಡ್ಯಾಂ ನಿರ್ಮಾಣಕ್ಕೆ ಬಳಸಲಾಗಿದೆ. ಇದೀಗ ಅಧಿಕಾರಿಗಳೇ ಸರ್ಕಾರದ ಆದೇಶ ಉಲ್ಲಂಘಿಸಿ ಚೆಕ್‌ಡ್ಯಾಂಗಳನ್ನು ಒಡೆಸುವ ಮೂಲಕ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಅಧಿಕಾರಿಗಳು ವಾಪಸ್‌: ಸ್ಥಳಕ್ಕೆ ಬಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ರೈತರನ್ನು ಸಮಾಧಾನಪಡಿಸಿ, ‘ಸದ್ಯಕ್ಕೆ ಚೆಕ್‌ಡ್ಯಾಂ ಒಡೆಯಬೇಡಿ’ ಎಂದು ಸೂಚಿಸಿ ಅಧಿಕಾರಿಗಳನ್ನು ವಾಪಸ್‌ ಕಳುಹಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಚೆಂಜಿಮಲೆ ರಮೇಶ್, ರೈತರಾದ ವೆಂಕಟೇಶ್, ನಾರಾಯಣಪ್ಪ, ಸುರೇಶ್, ರಾಮಣ್ಣ, ಮುನಿರಾಜು, ಈರಪ್ಪ, ಮಂಜು, ಕಿಟ್ಟಿ, ನಾರಾಯಣಸ್ವಾಮಿ ಸೇರಿದಂತೆ ಹಲವು ರೈತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT