ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್ | ಕೃಷ್ಣಮೃಗಗಳ ಜಾಗ ಕೈಗಾರಿಕೆಗೆ ಮೀಸಲು: ಕಂಗಾಲಾದ ವನ್ಯಜೀವಿಗಳು

ಕೃಷ್ಣಮೂರ್ತಿ
Published 25 ಮಾರ್ಚ್ 2024, 7:00 IST
Last Updated 25 ಮಾರ್ಚ್ 2024, 7:00 IST
ಅಕ್ಷರ ಗಾತ್ರ

ಕೆಜಿಎಫ್: ನಗರದ ಹೊರವಲಯದಲ್ಲಿ ಬೆಮಲ್‌ನಿಂದ ವಶಪಡಿಸಿಕೊಂಡ ಪ್ರದೇಶವನ್ನು ಕೈಗಾರಿಕೆಗೆ ಮೀಸಲು ಇಟ್ಟ ಪರಿಣಾಮ ಬೆಮಲ್ ಸುತ್ತಮುತ್ತ ಇದ್ದ ಕೃಷ್ಣಮೃಗಗಳ ಅವಾಸ ಸ್ಥಾನಕ್ಕೆ ಧಕ್ಕೆಯಾಗಿದೆ.

ಬೆಮಲ್‌ನಿಂದ ಬಡಮಾಕನಹಳ್ಳಿವರೆಗೂ ಕಾಡು ಪ್ರದೇಶವಿದೆ. ಬೆಮಲ್ ಎಚ್ ಅಂಡ್ ಪಿ, ಗಾಲ್ಫ್ ಕ್ಲಬ್ ಪ್ರದೇಶದಲ್ಲಿ ಮರಗಳು ಗುಂಪು ಗುಂಪಾಗಿ ಇದ್ದವು. ಈಗ ಕೈಗಾರಿಕಾ ಪ್ರದೇಶಕ್ಕಾಗಿ ಈ ಎಲ್ಲ ಜಾಗ ವಶಪಡಿಸಿಕೊಂಡ ನಂತರ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಟೆಂಡರ್ ಕರೆಯಲಾಗಿದೆ.

ನೂರಾರು ಕೆಲಸಗಾರರು ಪ್ರತಿನಿತ್ಯ ಮರಗಳನ್ನು ಕಡಿಯುವ ಕಾಯಕದಲ್ಲಿ ತೊಡಗಿರುವುದರಿಂದ ಒಮ್ಮೆ ಮರಗಳಿಂದ ತುಂಬಿದ್ದ ಪ್ರದೇಶ ಈಗ ಬಟ್ಟಬಯಲಾಗಿದೆ. ಹಸಿರು ಹೋಗಿ ಬಿಸಿಲು ಝಳ ಹೆಚ್ಚಾಗಿದೆ. ಜಿಂಕೆಗಳಿಗೆ ಬಿಸಿಲಿನ ತಾಪ ನೀಗಿಸಿಕೊಳ್ಳಲು ಮರಗಳೇ ಇಲ್ಲವಾಗಿದೆ. ಈ ಪ್ರದೇಶದಲ್ಲಿ ಬೆಳೆಯಲಾಗಿದ್ದ ನೀಲಗಿರಿ ಮರಕ್ಕೆ ಟೆಂಡರ್ ಕರೆಯಲಾಗಿದೆ. ಇದರ ಜತೆಗೆ ಇತರ ಜಾತಿ ಮರಗಳನ್ನು ಕೂಡ ಅಕ್ರಮವಾಗಿ ಕಡಿಯಲಾಗುತ್ತಿದೆ ಎಂದು ಈ ಪ್ರದೇಶದ ಜನ ಆರೋಪಿಸುತ್ತಾರೆ.

ಬಿರುಬೇಸಿಗೆ ತನ್ನ ತಾಪ ಹೆಚ್ಚಿಸುತ್ತಿರುವ ಕಾರಣದಿಂದಾಗಿ ಕುಂಟೆಗಳಲ್ಲಿ ನೀರು ಬತ್ತಿ ಹೋಗಿದೆ. ಜಲಮೂಲ ಇಲ್ಲದ ಕಾರಣ ಜಿಂಕೆಗಳು ನಗರದೊಳಗೆ ಪ್ರವೇಶ ಮಾಡುವುದು, ಬೀದಿ ನಾಯಿಗಳಿಗೆ ಬಲಿಯಾಗುವುದು ಇಲ್ಲವೇ ವಾಹನಗಳಿಗೆ ಸಿಕ್ಕಿ ಸಾಯುವ ಪ್ರಕರಣ ಹೆಚ್ಚುತ್ತಿದೆ.

ಜಿಂಕೆಗಳ ಅವಾಸ ಸ್ಥಾನ ಡಿ.ಕೆಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಯಥೇಚ್ಛವಾಗಿ ಸುರಿಯುತ್ತಿರುವುದರಿಂದ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಪ್ಲಾಸ್ಟಿಕ್‌ ಯುಕ್ತ ಮೇವು ತಿನ್ನುವ ಜಿಂಕೆಗಳು ಸಾಯುವ ಸಂಭವ ಇದೆ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.

ನೀರು ಮತ್ತು ಮೇವಿನ ಕೊರತೆ ಉಂಟಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಕಡೆಗೆ ಗಮನವನ್ನೇ ನೀಡಿಲ್ಲ. ಕಾಡು ಪ್ರಾಣಿಗಳಿಗೆ ಕನಿಷ್ಠ ನೀರು ಒದಗಿಸುವುದು ಕೂಡ ಅದ್ಯತೆ ಆಗಿಲ್ಲ. ಬೆಮಲ್ ಬಳಿ ಇರುವ ಸಣ್ಣ ತೊರೆಯಲ್ಲಿ ಸ್ವಲ್ಪ ನೀರು ಇದೆ. ಎರಡು ವಾರ ಆ ಪ್ರದೇಶದಲ್ಲಿ ಮಾತ್ರ ನೀರು ಸಿಗುತ್ತದೆ. ನಂತರ ಜಿಂಕೆಗಳು ಪರದಾಡಬೇಕಾಗುತ್ತದೆ ಎಂದು ಸುತ್ತಮುತ್ತ ಗ್ರಾಮಸ್ಥರು ಹೇಳುತ್ತಾರೆ.

ಪ್ರಾಣಿಗಳಿಗೆ ನೀರು ಒದಗಿಸುವುದಕ್ಕೆ ಅರಣ್ಯ ಇಲಾಖೆ ಬಳಿ ಸಾಕಷ್ಟು ಅನುದಾನ ಇಲ್ಲದೆ ಇರುವುದರಿಂದ ಸ್ವಯಂಸೇವಾ ಸಂಸ್ಥೆಗಳಿಗೆ ನೀರು ಒದಗಿಸಲು ಮನವಿ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಜಿಂಕೆಗಳ ಅವಾಸಸ್ಥಾನದಲ್ಲಿ ಬೆಮಲ್ ನಗರದ ತ್ಯಾಜ್ಯ ಸುರಿದಿರುವುದು
ಜಿಂಕೆಗಳ ಅವಾಸಸ್ಥಾನದಲ್ಲಿ ಬೆಮಲ್ ನಗರದ ತ್ಯಾಜ್ಯ ಸುರಿದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT