ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಹಸಿರುಮಯವಾಗಿಸಲು ಸಂಕಲ್ಪ

ಸಸಿ ನೆಡುವ ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಲತಾಕುಮಾರಿ ಹೇಳಿಕೆ
Last Updated 2 ಜುಲೈ 2018, 15:57 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯನ್ನು ಹಸಿರುಮಯವಾಗಿಸಲು ಸಂಕಲ್ಪ ಮಾಡಿದ್ದು, ಈ ಕಾರ್ಯಕ್ಕೆ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್‌.ಲತಾಕುಮಾರಿ ಮನವಿ ಮಾಡಿದರು.

ಹೋಂಡಾ ಕಂಪನಿಯು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ನಗರ ರೈಲು ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿರುವ ಸಸಿ ನೆಡುವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ‘ಜಿಲ್ಲೆಯಲ್ಲಿ ಹೆಚ್ಚಿನ ಮರ ಗಿಡ ಬೆಳೆಸುವ ಮೂಲಕ ಹಸಿರು ಕ್ರಾಂತಿ ಮಾಡಬೇಕು’ ಎಂದರು.

‘ಖಾಸಗಿ ಕಂಪನಿಗಳು, ಸಂಘ ಸಂಸ್ಥೆಗಳು ಸಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಸ್ಥಳೀಯರ ಸಹಕಾರ ಅಗತ್ಯ. ಕೈಗಾರಿಕೆಯವರು ಮೊದಲು ತಮ್ಮ ಜಾಗವನ್ನು ಹಸಿರುಮಯವಾಗಿಸಬೇಕು. ವಿಷಕಾರಿ ತ್ಯಾಜ್ಯ ನೀರನ್ನು ಕೆರೆ, ಖಾಲಿ ಪ್ರದೇಶ ಅಥವಾ ರಾಜಕಾಲುವೆಗೆ ಹರಿಬಿಡಬಾರದು. ಕಲುಷಿತ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಬೇಕು. ಈ ನೀರಿನಲ್ಲಿ ಕೈಗಾರಿಕೆಗಳ ಆವರಣಗಳನ್ನು ಗಿಡಗಳನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಮಾದರಿಯಾಗಬೇಕು: ‘ರೈಲು ನಿಲ್ದಾಣದ ಆವರಣದಲ್ಲಿ ಖಾಲಿ ಜಾಗ ಸಿಎಸ್ಆರ್‌ ಅಡಿ ಹೋಂಡಾ ಕಂಪನಿ ವತಿಯಿಂದ ಸುಮಾರು 1,400 ಸಸಿ ನೆಡಲು ತೀರ್ಮಾನಿಸಲಾಗಿದೆ. ಕಂಪನಿಯವರೇ ಸಸಿಗಳ ನಿರ್ವಹಣೆ ಮಾಡುತ್ತಾರೆ. ಹೋಂಡಾ ಕಂಪನಿಯ ಈ ಕಾರ್ಯ ಇತರ ಕಂಪನಿಗಳಿಗೆ ಮಾದರಿಯಾಗಬೇಕು’ ಎಂದು ಆಶಿಸಿದರು.

‘ಜಿಲ್ಲೆಯಲ್ಲಿ ಈಗಾಗಲೇ ವನಮಹೋತ್ಸವ ಹಾಗೂ ಪರಿಸರ ದಿನ ಆಚರಿಸಲಾಗಿದ್ದು, ಇದರ ಭಾಗವಾಗಿ ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಡುವ ಪ್ರಯತ್ನ ಆರಂಭಿಸಿದ್ದೇವೆ. ಗ್ರಾಮ ಪಂಚಾಯಿತಿಗಳ ವತಿಯಿಂದ ಖಾಲಿ ಜಾಗ, ಸರ್ಕಾರಿ ಜಾಗ, ನಿರುಪಯುಕ್ತ ಭೂಮಿಯಲ್ಲಿ ಅತಿ ಹೆಚ್ಚು ಸಸಿ ನೆಡಲು ಯೋಜನೆ ರೂಪಿಸಲಾಗಿದೆ’ ಎಂದು ವಿವರಿಸಿದರು.

ದೂರು ಬಂದಿವೆ: ‘ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಯಳಗೊಂಡನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೋಳಿ ಫಾರಂಗಳಿಂದ ನೊಣದ ಕಾಟ ಹೆಚ್ಚಿರುವ ಬಗ್ಗೆ ದೂರು ಬಂದಿವೆ. ಈ ದೂರಿನ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಪರಿಸರ ಅಧಿಕಾರಿ ಜತೆ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ನೊಣಗಳ ಕಾಟ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಕೋಳಿ ಫಾರಂಗಳ ಮಾಲೀಕರಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಇಲ್ಲದ ಕಾರಣ ನೊಣಗಳ ಕಾಟ ಹೆಚ್ಚಿದೆ ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಫಾರಂಗಳಲ್ಲಿ ಸ್ವಚ್ಛತೆ ನಿರ್ವಹಣೆಗೆ ಹೆಚ್ಚು ಆದ್ಯತೆ ಕೊಡಬೇಕು. ರೈತರು ಕೋಳಿ ಗೊಬ್ಬರ ಖರೀದಿಸಿಕೊಂಡು ಬಂದು ಜಮೀನುಗಳಲ್ಲಿ ದಾಸ್ತಾನು ಮಾಡುತ್ತಿರುವುದರಿಂದ ನೊಣಗಳ ಕಾಟ ಹೆಚ್ಚುತ್ತಿದೆ. ಆದ ಕಾರಣ ಆ ಗೊಬ್ಬರವನ್ನು ಶೀಘ್ರವೇ ವಿಲೇವಾರಿ ಮಾಡಬೇಕು’ ಎಂದು ತಿಳಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತ ಕೆ.ವಿ.ಶಂಕರಪ್ಪ, ಸಂಘಟನಾ ಆಯುಕ್ತ ವಿ.ಬಾಬು, ರೈಲ್ವೆ ಸ್ಟೇಷನ್ ಮಾಸ್ಟರ್ ಶರ್ಮಾ, ಹೋಂಡಾ ಕಂಪನಿ (ಸಿಎಸ್‌ಆರ್‌) ನಿರ್ದೇಶಕ ನಿತಿನ್, ಬೆಸ್ಕಾಂ ನಿವೃತ್ತ ಅಧಿಕಾರಿ ಮುನಿನಾರಾಯಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT