ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ| ಅನುಮತಿ ನಿರಾಕರಣೆ ನಂತರವೂ ಸಿಎಎ ಬೆಂಬಲಿಸಿ ಮೆರವಣಿಗೆ: ಲಾಠಿ ಪ್ರಹಾರ

Last Updated 4 ಜನವರಿ 2020, 12:15 IST
ಅಕ್ಷರ ಗಾತ್ರ

ಕೋಲಾರ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಬೆಂಬಲಿಸಿ ಇಲ್ಲಿ ಶನಿವಾರ ಮೆರವಣಿಗೆ ನಡೆಸಲು ಮುಂದಾದ ಬಿಜೆಪಿ ಕಾರ್ಯಕರ್ತರು ಹಾಗೂ ಭಾರತೀಯ ಹಿತರಕ್ಷಣಾ ವೇದಿಕೆ ಸದಸ್ಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಿಜೆಪಿ, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳನ್ನು ಒಳಗೊಂಡ ಭಾರತೀಯ ಹಿತರಕ್ಷಣಾ ವೇದಿಕೆಯು ನಗರದ ಎಂ.ಜಿ ರಸ್ತೆಯ ಚಂಪಕ್‌ ವೃತ್ತದಲ್ಲಿ ಸಿಎಎ ಬೆಂಬಲಿಸಿ ಜನಾಂದೋಲನ ನಡೆಸಲು ಪೂರ್ವಾನುಮತಿ ಪಡೆದಿತ್ತು. ಪೊಲೀಸ್‌ ಇಲಾಖೆಯು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಮೆರವಣಿಗೆಗೆ ಅನುಮತಿ ನಿರಾಕರಿಸಿತ್ತು.

ಆದರೆ, ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಭಾರತೀಯ ಹಿತರಕ್ಷಣಾ ವೇದಿಕೆ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರು ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಲಾಕ್‌ ಟವರ್‌ ಮಾರ್ಗವಾಗಿ ಮೆರವಣಿಗೆ ನಡೆಸಲು ಮುಂದಾದರು. ಪೊಲೀಸರು ಮೆರವಣಿಗೆಗೆ ತಡೆಯೊಡ್ಡಿದ್ದರಿಂದ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಲು ಯತ್ನಿಸಿದರು.

ಈ ಹಂತದಲ್ಲಿ ಪರಸ್ಪರ ವಾಗ್ವಾದ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಮನಗಂಡ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ್ದರಿಂದ ನೂಕುನುಗ್ಗಲು ಉಂಟಾಗಿ ಹಲವರು ಕೆಳಗೆ ಬಿದ್ದು ಗಾಯಗೊಂಡರು. ಘಟನೆಯಲ್ಲಿ 3 ಮಂದಿ ಪೊಲೀಸ್‌ ಸಿಬ್ಬಂದಿಯೂ ಗಾಯಗೊಂಡರು.

ಕಾರ್ಯಕರ್ತರ ತರಾಟೆ

ಲಾಠಿ ಪ್ರಹಾರದ ವೇಳೆ ಪ್ರವಾಸಿ ಮಂದಿರದಲ್ಲಿದ್ದ ಸಚಿವರಾದ ಆರ್‌.ಅಶೋಕ್‌, ಎಚ್‌.ನಾಗೇಶ್‌ ಹಾಗೂ ಸಂಸದ ಎಸ್‌.ಮುನಿಸ್ವಾಮಿ ಘಟನಾ ಸ್ಥಳಕ್ಕೆ ಬರಲಿಲ್ಲ. ಇದರಿಂದ ಅಸಮಾಧಾನಗೊಂಡ ಪಕ್ಷದ ಕಾರ್ಯಕರ್ತರು ಚಂಪಕ್‌ ವೃತ್ತದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಚಿವರು ಮತ್ತು ಸಂಸದರ ವಿರುದ್ಧ ಧಿಕ್ಕಾರ ಕೂಗಿದರು. ಮನವೊಲಿಕೆಗೆ ಮುಂದಾದ ಅಶೋಕ್‌ ಮತ್ತು ಮುನಿಸ್ವಾಮಿ ಅವರನ್ನು ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡರು.

‘ಇಷ್ಟೆಲ್ಲಾ ಗೊಂದಲಕ್ಕೆ ಸಂಸದರೇ ಕಾರಣ. ಸಂಸದರು ಸೌಜನ್ಯಕ್ಕೂ ಪೊಲೀಸರ ಕ್ರಮ ಪ್ರಶ್ನಿಸಿಲ್ಲ. ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಅಮಾನತು ಮಾಡಬೇಕು’ ಎಂದು ಕಾರ್ಯಕರ್ತರು ಆಗ್ರಹಿಸಿದರು. ಮುನಿಸ್ವಾಮಿ ಅವರು ತಾಳ್ಮೆ ಕಳೆದುಕೊಂಡು ಕಾರ್ಯಕರ್ತರೊಬ್ಬರಿಗೆ ಕಪಾಳ ಮೋಕ್ಷ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT