ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: 31ಕ್ಕೆ ಪೋಲಿಯೊ ಲಸಿಕೆ ಅಭಿಯಾನ

ಪತ್ರಿಕಾಗೋಷ್ಠಿಯಲ್ಲಿ ಡಿಎಚ್‌ಒ ವಿಜಯ್‌ಕುಮಾರ್ ಮಾಹಿತಿ
Last Updated 28 ಜನವರಿ 2021, 13:07 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿ ಜ.31ರಿಂದ ಪೋಲಿಯೊ ಲಸಿಕೆ ಅಭಿಯಾನ ಆರಂಭವಾಗಲಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ತಿಳಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟಾರೆ 3 ದಿನ ಪೋಲಿಯೊ ಲಸಿಕೆ ಅಭಿಯಾನ ನಡೆಯುತ್ತದೆ. ಮೊದಲ ದಿನ ಲಸಿಕಾ ಕೇಂದ್ರಗಳಲ್ಲಿ ಹಾಗೂ ನಂತರದ 2 ದಿನ ಮನೆ ಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.

‘ಪೋಲಿಯೊ ನಿರ್ಮೂಲನೆಯಲ್ಲಿ ಭಾರತ ದೇಶವು ಗಣನೀಯ ಪ್ರಗತಿ ಸಾಧಿಸಿದ್ದು, 2011ರಿಂದ ಹೊಸದಾಗಿ ಯಾವುದೇ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ಭಾರತವು ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ 2014ರಲ್ಲಿ ಪೋಲಿಯೊ ಮುಕ್ತ ರಾಷ್ಟ್ರವೆಂಬ ಪ್ರಮಾಣಪತ್ರ ಪಡೆದಿದೆ’ ಎಂದು ಮಾಹಿತಿ ನೀಡಿದರು.

‘ಪಾಕಿಸ್ತಾನ, ಅಘ್ಟಾನಿಸ್ತಾನದಲ್ಲಿ ಪೋಲಿಯೊ ಪ್ರಕರಣ ಕಂಡುಬಂದಿರುವುದರಿಂದ ಹಾಗೂ ಪೋಲಿಯೊ ಮತ್ತೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಲಸಿಕೆ ಅಭಿಯಾನ, ಸಾರ್ವತ್ರಿಕ ಲಸಿಕೆ ಕಾರ್ಯಕ್ರಮ, ಸರ್ವೇಕ್ಷಣೆ ಕಾರ್ಯಕ್ರಮಗಳನ್ನು ಜಾಗರೂಕತೆಯಿಂದ ಮತ್ತು ಜವಾಬ್ದಾರಿಯುತವಾಗಿ ನಿರ್ವಹಿಸಬೇಕಿದೆ’ ಎಂದು ವಿವರಿಸಿದರು.

‘ಕರ್ನಾಟಕದಲ್ಲಿ ಕೊನೆಯ ಪೋಲಿಯೊ ಪ್ರಕರಣ 2007ರ ನವೆಂಬರ್‌ನಲ್ಲಿ ರಾಜ್ಯಕ್ಕೆ ವಲಸೆ ಬಂದಿದ್ದ ಗುಂಪಿನಲ್ಲಿ ಪತ್ತೆಯಾಗಿತ್ತು. ನಂತರ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ. ಪೋಲಿಯೊ ಕಾಯಿಲೆ ನಿರ್ಮೂಲನೆಗೆ ಹಲವು ಇಲಾಖೆಗಳ ಅಧಿಕಾರಿಗಳು, ನೌಕರರು, ಸ್ವಯಂ ಸೇವಕರು ಶ್ರಮಿಸುತ್ತಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಸಿಕೆ ಗುರಿ: ‘ಜಿಲ್ಲೆಯಲ್ಲಿ 2020ರಲ್ಲಿ 1,62,332 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಮೂಲಕ ಶೇ 104ರಷ್ಟು ಪ್ರಗತಿ ಸಾಧಿಸಲಾಯಿತು. ಈ ವರ್ಷ ಜಿಲ್ಲೆಯಲ್ಲಿ 1,57,125 ಮಕ್ಕಳಿಗೆ ಲಸಿಕೆ ಹಾಕುವ ಗುರಿಯಿದೆ. ಒಟ್ಟಾರೆ 743 ಬೂತ್‌, 46 ಸಂಚಾರ ತಂಡ ಹಾಗೂ 1 ಮೊಬೈಲ್ ತಂಡದೊಂದಿಗೆ ಮೊದಲ ದಿನ ಲಸಿಕೆ ಹಾಕಲಾಗುತ್ತದೆ’ ಎಂದರು.

‘2 ಮತ್ತು -3ನೇ ದಿನ 3,58,398 ಮನೆಗಳಿಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 1,913 ಗಂಡಾಂತರ ಪ್ರದೇಶ ಗುರುತಿಸಿದ್ದು, ಇಲ್ಲಿನ ಮಕ್ಕಳಿಗೆ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

3,160 ಸಿಬ್ಬಂದಿ: ‘ಪೋಲಿಯೊ ಲಸಿಕೆ ಅಭಿಯಾನದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಆರೋಗ್ಯ ಸಿಬ್ಬಂದಿ ಸೇರಿದಂತೆ 3,160 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. 163 ಮೇಲ್ವಿಚಾರಕರು ಅಭಿಯಾನದ ಮೇಲ್ವಿಚಾರಣೆ ನಡೆಸಲಿದ್ದಾರೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ವಿವರಿಸಿದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ್‌ರಾಜ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಾಭಿವೃದ್ಧಿ ಮತ್ತು ಇತರೆ ಇಲಾಖೆಗಳ ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಅಭಿಯಾನದಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದರು.ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್‌ಕುಮಾರ್, ಕೋಲಾರ ತಾಲ್ಲೂಕು ಆರೋಗ್ಯಾಧಿಕಾರಿ ರಮ್ಯಾ ದೀಪಿಕಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT