ಗುರುವಾರ , ಜನವರಿ 30, 2020
22 °C
‘ಪ್ರಜಾವಾಣಿ’ ಫೋನ್‌ಇನ್‌ ಕಾರ್ಯಕ್ರಮದ

ಧನಾತ್ಮಕ ಚಿಂತನೆಯು ಯಶಸ್ಸಿಗೆ ರಹದಾರಿ: ಡಿಡಿಪಿಐ ರತ್ನಯ್ಯ ಕಿವಿಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಎಸ್ಸೆಸ್ಸೆಲ್ಸಿಯು ಶೈಕ್ಷಣಿಕ ಜೀವನದ ಪ್ರಮುಖ ಘಟ್ಟ. ಹೀಗಾಗಿ ಮಕ್ಕಳಲ್ಲಿ ಪರೀಕ್ಷಾ ಒತ್ತಡ ಸಹಜ. ಧನಾತ್ಮಕ ಚಿಂತನೆಯು ಯಶಸ್ಸಿಗೆ ರಹದಾರಿ ಎಂಬುದನ್ನು ಮಕ್ಕಳು ಅರಿಯಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

‘ಪ್ರಜಾವಾಣಿ’ಯು ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿ, ‘ಮಕ್ಕಳು ಮಾನಸಿಕ ಒತ್ತಡ ಹಾಗೂ ಉದ್ವೇಗದಿಂದ ದೂರವಿದ್ದು, ಮುಕ್ತ ಮನಸ್ಸಿನಿಂದ ಪರೀಕ್ಷೆ ಬರೆಯಬೇಕು. ಧನಾತ್ಮಕ ಚಿಂತನೆಯು ನಕಾರಾತ್ಮಕ ಆಲೋಚನೆಗಳನ್ನು ಮನಸ್ಸಿನಿಂದ ದೂರ ಮಾಡಲು ಸಹಾಯ ಮಾಡುತ್ತದೆ’ ಎಂದು ಸಲಹೆ ನೀಡಿದರು.

ಬೆಳಿಗ್ಗೆ 10 ಗಂಟೆಯಿಂದ ಸತತ ಒಂದೂವರೆ ತಾಸು ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು ಕರೆ ಮಾಡಿ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸ್ವರೂಪ, ಗುಂಪು ಅಧ್ಯಯನ, ಪರೀಕ್ಷಾ ಭಯ ದೂರ ಮಾಡುವ ಬಗೆ, ಪರೀಕ್ಷೆಗೆ ಸಿದ್ಧತೆ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಡಿಡಿಪಿಐ ರತ್ನಯ್ಯ, ಕೆಜಿಎಫ್‌ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್‌, ಗಣಿತ ವಿಷಯ ಪರಿವೀಕ್ಷಕ ವಿ.ಕೃಷ್ಣಪ್ಪ, ವಿಜ್ಞಾನ ವಿಷಯ ಪರಿವೀಕ್ಷಕಿ ಕೆ.ಎಸ್‌.ಶಶಿವದನ ಮತ್ತು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕಿ ಪಿ.ವಿ.ಗಾಯತ್ರಿ ಅವರ ಮಕ್ಕಳ ಸಮಸ್ಯೆ ಆಲಿಸಿ ಗೊಂದಲ ಪರಿಹರಿಸುವ ಪ್ರಯತ್ನ ಮಾಡಿದರು. ಮಕ್ಕಳ ಪ್ರಶ್ನೆಗಳಿಗೆ ಡಿಡಿಪಿಐ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಉತ್ತರ ಕೆಳಗಿನಂತಿದೆ.

* ನವೀನ್‌ಕುಮಾರ್‌, ಬಲಮಂದೆ: ಓದಲು ಆಸಕ್ತಿಯೇ ಇಲ್ಲ. ಓದಿದ ಅಲ್ಪಸ್ವಲ್ಪ ವಿಷಯವು ಮರೆತು ಹೋಗುತ್ತದೆ. ಓದಿದ ವಿಷಯ ದೀರ್ಘ ಕಾಲದವರೆಗೆ ನೆನಪಿನಲ್ಲಿರಲು ಏನು ಮಾಡಬೇಕು?

–ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿದ್ದಾರೆ. ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಶೈಕ್ಷಣಿಕ ಸಾಧನೆಯ ಸಂಕಲ್ಪ ಮಾಡಬೇಕು.ಓದುವುದು ಕಷ್ಟ ಎಂದು ತಿಳಿಯಬಾರದು. ಆಸಕ್ತಿಯಿಲ್ಲದ ವಿಷಯ ತಿಳಿದುಕೊಳ್ಳಲು ಶಿಕ್ಷಕರು ಮತ್ತು ಸ್ನೇಹಿತರ ಜತೆ ಚರ್ಚಿಸಬೇಕು. ಆಗ ಅಸಕ್ತಿ ಬರುತ್ತದೆ. ಬಾಯಿಪಾಠ ಮಾಡುವುದಕ್ಕಿಂತ ವಿಷಯ ಅರ್ಥ ಮಾಡಿಕೊಂಡು ಓದು ಮುಂದುವರಿಸಬೇಕು. ಗುಂಪು ಚರ್ಚೆಯಿಂದ ವಿಷಯಗಳ ಮಾಹಿತಿ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ.

* ಭಾರತಿ, ಬಲಮಂದೆ ಸರ್ಕಾರಿ ಪ್ರೌಢ ಶಾಲೆ: ಕನ್ನಡ ವಿಷಯದ ಪರೀಕ್ಷೆಯಲ್ಲಿ ಉತ್ತರ ಬರೆಯಲು ಸಮಯ ಸಾಲುವುದಿಲ್ಲ. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಮಯ ಹೊಂದಿಸಿಕೊಳ್ಳುವುದು ಹೇಗೆ

–125 ಅಂಕಗಳ ಕನ್ನಡ ವಿಷಯ ಪರೀಕ್ಷೆಗೆ 3 ಗಂಟೆ 15 ನಿಮಿಷ ಸಮಯಾವಕಾಶ ನೀಡಲಾಗಿದೆ. ಪರೀಕ್ಷೆ ಆರಂಭವಾದಾಗ ಮೊದಲ 15 ನಿಮಿಷ ಪ್ರಶ್ನೆಪತ್ರಿಕೆ ಓದಲು ಮೀಸಲಿಡಬೇಕು. ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಬೇಕು. ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಅಂತ್ಯದಲ್ಲಿ ಉತ್ತರಿಸಬೇಕು. ಉತ್ತರ ಗೊತ್ತಿಲ್ಲದ ಪ್ರಶ್ನೆಗಳ ಬಗ್ಗೆ ಹೆಚ್ಚು ಆಲೋಚಿಸುತ್ತಾ ಸಮಯ ಹಾಳು ಮಾಡಬಾರದು.

* ಮಹೇಶ್‌, ಆಶ್ಲೆ ಇಂಟರ್‌ನ್ಯಾಷನಲ್‌ ಶಾಲೆ, ಬಂಗಾರಪೇಟೆ: ಹಳಗನ್ನಡ ಪದ್ಯ ನೆನಪಿನಲ್ಲಿ ಇಟ್ಟುಕೊಳ್ಳಲು ಕಷ್ಟವಾಗುತ್ತಿದೆ. ಹಳಗನ್ನಡ ಪದ್ಯಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಇರುವ ಮಾರ್ಗವೇನು?

–ಹಳಗನ್ನಡ ಪದ್ಯಗಳಲ್ಲಿ ಸಂಸ್ಕೃತದ ಪದಗಳು ಸೇರಿಕೊಂಡಿರುತ್ತವೆ. ಜತೆಗೆ ಒತ್ತಕ್ಷರಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೀಗಾಗಿ ಹಳಗನ್ನಡ ಪದ್ಯಗಳ ಓದು ಸ್ಪಲ್ಪ ಕಷ್ಟ. ಈ ಬಗ್ಗೆ ಗೊಂದಲಕ್ಕೆ ಒಳಗಾಗದೆ ಪದ್ಯದ ಒಟ್ಟಾರೆ ಸಾರಾಂಶ ತಿಳಿದುಕೊಳ್ಳಬೇಕು. ಪದ್ಯಗಳನ್ನು ಸತತವಾಗಿ ಓದಿ ಅಭ್ಯಾಸ ಮಾಡಬೇಕು. ಪದ್ಯಗಳನ್ನು ಹಲವು ಬಾರಿ ಬರೆದು ಅಭ್ಯಾಸ ಮಾಡಿದರೆ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತವೆ.

* ಅಬುಬಕರ್‌, ಬಂಗಾರಪೇಟೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕ ಸ್ವರೂಪ ಬದಲಿಸಿರುವುದಕ್ಕೆ ಕಾರಣವೇನು? 5 ಅಂಕದ ಪ್ರಶ್ನೆಗಳ ಸಂಖ್ಯೆ ಹೆಚ್ಚಿಸಿರುವುದೇಕೆ?

–ಮಕ್ಕಳ ಬರವಣಿಗೆ ಮತ್ತು ಜ್ಞಾನ ಕೌಶಲ ಉತ್ತಮಪಡಿಸುವ ಉದ್ದೇಶಕ್ಕಾಗಿ ಈ ಬಾರಿ ಪ್ರಶ್ನೆಪತ್ರಿಕೆ ಸ್ವರೂಪ ಬದಲಿಸಲಾಗಿದೆ. 5 ಅಂಕದ ಪ್ರಶ್ನೆಗಳಲ್ಲಿ ಆಯ್ಕೆಯ ಅವಕಾಶವಿಲ್ಲ. ಪ್ರಬಂಧ, ಪತ್ರ ಇರುವುದರಿಂದ ಬರವಣಿಗೆ ಉತ್ತಮಪಡಿಸಿಕೊಳ್ಳಬೇಕು.

* ಆರೀಫ್‌, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ: ಶಾಲೆ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ್ದೇನೆ. ಆದರೆ, ಮುಖ್ಯ ಪರೀಕ್ಷೆ ದಿನಾಂಕ ಸಮೀಪಿಸುತ್ತಿರುವಂತೆ ಭಯ ಹೆಚ್ಚಾಗುತ್ತಿದೆ. ಪರೀಕ್ಷಾ ಭಯ ನಿವಾರಣೆಗೆ ಏನು ಮಾಡಬೇಕು?

–ಶಾಲೆಯಲ್ಲಿ ನಡೆಯುವ ಸಾಮಾನ್ಯ ಪರೀಕ್ಷೆ ಮಾದರಿಯಲ್ಲೇ ಅಂತಿಮ ಪರೀಕ್ಷೆಯೂ ಇರುತ್ತದೆ. ಸತತ ಅಧ್ಯಯನದಿಂದ ವಿಷಯ ತಿಳಿದುಕೊಂಡರೆ ಪರೀಕ್ಷಾ ಭಯ ದೂರವಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆಪತ್ರಿಕೆ ಕೊಡುತ್ತಿದ್ದಂತೆ ಉತ್ತರ ಬರೆಯಲು ಆರಂಭಿಸಬಾರದು. ಕೆಲ ಸಮಯ ಪ್ರಶ್ನೆಪತ್ರಿಕೆ ಓದಲು ಮೀಸಲಿಡಬೇಕು. ಮನುಷ್ಯನ ಮಿದುಳು ಕಂಪ್ಯೂಟರ್‌ ಇದ್ದಂತೆ. ಓದಿ ಅರ್ಥ ಮಾಡಿಕೊಂಡ ವಿಷಯ ಮಿದುಳಿನಲ್ಲಿ ಸಂಗ್ರಹವಾಗಿರುತ್ತದೆ. ಪ್ರಶ್ನೆಪತ್ರಿಕೆ ಓದಲಾರಂಭಿಸಿದಾಗ ವಿಷಯ ಒಂದೊಂದಾಗಿ ಹೊರ ಬರುತ್ತದೆ.

* ರಕ್ಷಿತಾ: ಭಾಷಾ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸುವುದು ಹೇಗೆ?

–ಭಾಷೆ ವಿಷಯಗಳಲ್ಲಿ ಅಂಕ ಗಳಿಸುವುದು ಬಹಳ ಸುಲಭ. ವ್ಯಾಕರಣ ಲೋಪ, ವಾಕ್ಯ ರಚನೆ, ಅಂದವಾದ ಬರವಣಿಗೆಗೆ ಹೆಚ್ಚು ಒತ್ತು ಕೊಡಬೇಕು. ತಪ್ಪಿಲ್ಲದಂತೆ ವಾಕ್ಯ ರಚನೆ ಮಾಡಬೇಕು. ಭಾಷಾ ವಿಷಯಗಳ ಪರೀಕ್ಷೆ ಬರೆಯುವಾಗ ಸಮಯದ ನಿರ್ವಹಣೆ ಬಹಳ ಮುಖ್ಯ.

* ಸಿರಿಷಾ, ಅಮರಜ್ಯೋತಿ ಶಾಲೆ, ಮುಳಬಾಗಿಲು: ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು, ಶಿಕ್ಷಕರು ಈವರೆಗೂ ಪ್ರಶ್ನೆಪತ್ರಿಕೆಯ ನೀಲನಕ್ಷೆ ಕೊಟ್ಟಿಲ್ಲ. ಹೀಗಾಗಿ ಪ್ರಶ್ನೆಪತ್ರಿಕೆಯ ಮಾದರಿ ಬಗ್ಗೆ ಗೊಂದಲವಾಗಿದೆ.

–ಪ್ರಶ್ನೆಪತ್ರಿಕೆಯ ನೀಲನಕ್ಷೆ ವಿದ್ಯಾರ್ಥಿಗಳು ಆಲೋಚಿಸುವ ಅಗತ್ಯವಿಲ್ಲ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಶಿಕ್ಷಕರ ಅನುಕೂಲಕ್ಕೆ ನೀಲನಕ್ಷೆ ಕೊಡಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೂ ನೀಲನಕ್ಷೆಗೂ ಸಂಬಂಧವಿಲ್ಲ. ಪ್ರಶ್ನೆಪತ್ರಿಕೆ ಮಾದರಿ ಬಗ್ಗೆ ಶಿಕ್ಷಕರು ಮಾಹಿತಿ ಕೊಡುತ್ತಾರೆ. ವಿದ್ಯಾರ್ಥಿಗಳ ಗಮನ ಪರೀಕ್ಷೆಗೆ ಸಿದ್ಧವಾಗುವತ್ತ ಇರಬೇಕು.

* ಕೀರ್ತನಾ, ಸರ್ಕಾರಿ ಜೂನಿಯರ್ ಕಾಲೇಜು, ಮಾಲೂರು: ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡ ಶಿಕ್ಷಕರು ಕಟ್ಟುನಿಟ್ಟಾಗಿ ನಿಯಮ ಪಾಲಿಸುತ್ತಾರೆ. ಅಕ್ಕಪಕ್ಕ ತಿರುಗಿ ನೋಡಿದರೂ ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸುತ್ತಾರೆ ಎಂದು ತರಗತಿ ಶಿಕ್ಷಕರು ಭಯ ಹುಟ್ಟಿಸಿದ್ದಾರೆ. ಪರೀಕ್ಷೆಗಿಂತ ಕೊಠಡಿ ಮೇಲ್ವಿಚಾರಕರ ಭಯವೇ ಹೆಚ್ಚಿದೆ.

–ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡವರು ಶಿಕ್ಷಕರೇ ಆಗಿರುತ್ತಾರೆ. ಪರೀಕ್ಷಾ ನಕಲು ತಡೆಗೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ. ಕೊಠಡಿ ಮೇಲ್ವಿಚಾರಕರ ಬಗ್ಗೆ ಹೆಚ್ಚಿನ ಭಯ ಬೇಡ. ಅವರು ವಿನಾ ಕಾರಣ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸುವುದಿಲ್ಲ. ಅವರಿಗೆ ಪರೀಕ್ಷೆ ನಿರ್ವಹಣೆ ಬಗ್ಗೆ ಮೊದಲೇ ತರಬೇತಿ ನೀಡಲಾಗಿರುತ್ತದೆ.

* ಚಿತ್ರಾ, ಮಾಲೂರು: ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯು ಸಿದ್ಧಪಡಿಸುವ ಮಾದರಿ ಪ್ರಶ್ನೆಪತ್ರಿಕೆ ನೀಡಿದರೆ ಪರೀಕ್ಷಾ ಅನುಕೂಲವಾಗುತ್ತದೆ. ಶಾಲೆಗಳಿಗೆ ಯಾವಾಗ ಮಾದರಿ ಪ್ರಶ್ನೆಪತ್ರಿಕೆ ವಿತರಣೆ ಮಾಡಲಾಗುತ್ತದೆ.

–ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಮಂಡಳಿಯು ಮಾದರಿ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿದೆ. ಪ್ರತಿ ವಿಷಯದ 6 ಸೆಟ್‌ ಪ್ರಶ್ನೆಪತ್ರಿಕೆಗಳನ್ನು ಸದ್ಯದಲ್ಲೇ ಎಲ್ಲಾ ಶಾಲೆಗಳಿಗೆ ಕಳುಹಿಸಲಾಗುತ್ತದೆ. ಜತೆಗೆ ಪರೀಕ್ಷಾ ಮಂಡಳಿಯ ವೆಬ್‌ಸೈಟ್‌ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಲಭ್ಯವಿವೆ.

* ಹರ್ಷಿತಾ ಮತ್ತು ವೈಷ್ಣವಿ: ದ್ವಿತೀಯ ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆಯ ಅಂಕ ಹಂಚಿಕೆ ಮಾದರಿಯ ಮಾಹಿತಿಯಿಲ್ಲ. ಈ ಪ್ರಶ್ನೆಪತ್ರಿಕೆಗಳ ಅಂಕ ಹಂಚಿಕೆ ಸ್ವರೂಪ ಹೇಗಿರುತ್ತದೆ?

–1 ಅಂಕದ 8 ಪ್ರಶ್ನೆ, ಬಹು ಆಯ್ಕೆ ಉತ್ತರದ 1 ಅಂಕದ 8 ಪ್ರಶ್ನೆ, 2 ಅಂಕದ 8, 3 ಅಂಕದ 9, 4 ಅಂಕದ 4 ಹಾಗೂ 5 ಅಂಕದ 1 ಪ್ರಶ್ನೆ ಇರುತ್ತವೆ. ಪಠ್ಯಕ್ರಮ ಬಿಟ್ಟು ಹೊರಗಿನ ಪ್ರಶ್ನೆ ಕೊಡುವುದಿಲ್ಲ. ಪಠ್ಯಪುಸ್ತಕ ಓದಿಗೆ ಒತ್ತು ಕೊಡಬೇಕು. ಯಾವ ಪ್ರಶ್ನೆ ಬರುತ್ತದೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ.

* ಸಿರಿ ಮತ್ತು ಕಾರ್ತಿಕ್‌: ಓದಿದ ವಿಷಯವನ್ನು ದೀರ್ಘ ಕಾಲದವರೆಗೆ ನೆನಪಿನಲ್ಲಿ ಇಟ್ಟುಕೊಳ್ಳಲು ಏನು ಮಾಡಬೇಕು?

–ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜೀವನದ ಮಹತ್ವದ ಘಟ್ಟ. ಪ್ರತಿ ವಿಷಯವನ್ನು ಇಷ್ಟಪಟ್ಟು ಕಲಿತರೆ ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿ ಪಾಠದ ಅಧ್ಯಯನದ ನಂತರ ಸಣ್ಣ ಚಾರ್ಟ್‌ ಸಿದ್ಧ ಮಾಡಬೇಕು. ಪರೀಕ್ಷೆಗೆ 70 ದಿನ ಬಾಕಿಯಿದ್ದು, ರಾತ್ರಿ ಮಲಗುವಾಗ ಆ ಚಾರ್ಟ್‌ ಮೇಲೆ ಒಮ್ಮೆ ಕಣ್ಣು ಹಾಯಿಸಬೇಕು. ಓದಿದ ವಿಷಯವನ್ನು ಪುನರ್‌ ಮನನ ಮಾಡಬೇಕು. ಸತತ ಅಭ್ಯಾಸದಿಂದ ಪರಿಪೂರ್ಣತೆ ಸಾಧಿಸಬಹುದು.

* ಮಾನಸ, ಕೋಲಾರ: 2 ಅಂಕದ ಪ್ರಶ್ನೆಗಳಿಗೆ ಗೊತ್ತಿರುವಷ್ಟು ಉತ್ತರ ಬರೆದರೆ ಪೂರ್ಣ ಅಂಕ ಸಿಗುತ್ತದೆಯೇ? ಪ್ರಶ್ನೆಗಳಿಗೆ ಅನುಕ್ರಮದಲ್ಲೇ ಉತ್ತರ ಬರೆಯಬೇಕೆ?

–ವಿದ್ಯಾರ್ಥಿಗಳು ಎಷ್ಟು ಉತ್ತರ ಬರೆಯುತ್ತಾರೋ ಅಷ್ಟಕ್ಕೆ ಮಾತ್ರ ಅಂಕ ಸಿಗುತ್ತದೆ. ಸಂಬಂಧಪಡದ ಉತ್ತರ ಬರೆದರೆ ಅಂಕ ಕೊಡುವುದಿಲ್ಲ. ಪ್ರಶ್ನೆಗಳಿಗೆ ಅನುಕ್ರಮದಲ್ಲೇ ಉತ್ತರ ಬರೆಯಬೇಕೆಂಬ ನಿಯಮವಿಲ್ಲ. ಮೊದಲ ಉತ್ತರ ಗೊತ್ತಿರುವ ಉತ್ತರಿಸಬೇಕು. ಆದರೆ, ಪ್ರಶ್ನೆ ಸಂಖ್ಯೆ ಸರಿಯಾಗಿ ನಮೂದಿಸಬೇಕು.

* ಸಲೇಹಾ: ಹಿಂದಿ ವಿಷಯವು ತುಂಬಾ ಕಷ್ಟವೆನಿಸುತ್ತದೆ. ಉತ್ತರ ಬರೆಯಲು ಸಮಯ ಸಾಲುವುದಿಲ್ಲ. ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಏನು ಮಾಡಬೇಕು?

–ಹಿಂದಿ ವಿಷಯದ ಮೌಲ್ಯಮಾಪನಕ್ಕೆ ಹೆಚ್ಚು ಕಠಿಣ ನಿಯಮ ಪಾಲಿಸುವುದಿಲ್ಲ. ಸಾಧ್ಯವಾದಷ್ಟು ವ್ಯಾಕರಣ ದೋಷವಿಲ್ಲದಂತೆ ಉತ್ತರ ಬರೆಯಬೇಕು. ಪ್ರಬಂಧ ರಚನೆಗೆ ಒತ್ತು ಕೊಡಿ.

* ರವಿಕುಮಾರ್, ಕೆಜಿಎಫ್‌: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಏನು ಕ್ರಮ ಕೈಗೊಂಡಿದ್ದೀರಿ. ಹೆಚ್ಚು ಕಠಿಣವೆನಿಸುವ ಇಂಗ್ಲಿಷ್‌ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ಹೇಗೆ ಸಿದ್ಧಗೊಳಿಸುತ್ತಿದ್ದೀರಿ?

–ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶ ಸಾಧನೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನಕ್ಕೆ ತಲುಪಿದೆ. ಈ ವರ್ಷ ಜಿಲ್ಲೆಯ ಮೊದಲ 4 ಸ್ಥಾನದೊಳಗೆ ಇರುವಂತೆ ಮಾಡಲು ಶಕ್ತಿಮೀರಿ ಪ್ರಯತ್ನ ಮುಂದುವರಿಸಿದ್ದೇವೆ. ಹಿಂದಿನ ವರ್ಷ ಕಡಿಮೆ ಫಲಿತಾಂಶ ಗಳಿಸಿದ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಒತ್ತು ಕೊಟ್ಟಿದ್ದೇವೆ. ಎಲ್ಲಾ ಶಾಲೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಗುತ್ತಿದೆ. ದಸರಾ ರಜೆ ಸಂದರ್ಭದಲ್ಲೂ ವಿಶೇಷ ತರಗತಿ ನಡೆಸಲಾಗಿದೆ.

–ನಿರ್ವಹಣೆ: ಜೆ.ಆರ್.ಗಿರೀಶ್‌ ಮತ್ತು ಕೆ.ಎಸ್‌ಸುದರ್ಶನ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು