ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮೆ ಪರಿಹಾರಕ್ಕೆ ಆಲೂಗಡ್ಡೆ ಬೆಳೆಗಾರರ ಮನವಿ

ಅನರ್ಹರಿಗೆ ಸಹಾಯಧನ: ಜಿ.ಪಂ ಸಿಇಒ ಭೇಟಿಯಾದ ನಿಯೋಗದ ಆರೋಪ
Last Updated 4 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಕೋಲಾರ: ಆಲೂಗಡ್ಡೆ ಬೆಳೆಗಾರರಿಗೆ ಸಹಾಯಧನ, ಕೀಟನಾಶಕ ಹಾಗೂ ವಿಮೆ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ರೈತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್ ಅವರಿಗೆ ಇಲ್ಲಿ ಬುಧವಾರ ಮನವಿ ಮಾಡಿದರು.

ಆಲೂಗಡ್ಡೆ ಬೆಳೆಗಾರರ ನಿಯೋಗದೊಂದಿಗೆ ಜಿ.ಪಂ ಸಿಇಒ ದರ್ಶನ್‌ ಅವರನ್ನು ಭೇಟಿಯಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ‘ರೈತರು ಡಿಸೆಂಬರ್ ತಿಂಗಳಲ್ಲಿ ಆಲೂಗಡ್ಡೆ ಬಿಟ್ಟರೆ ಬೇರೆ ಬೆಳೆ ಬಿತ್ತನೆ ಮಾಡುವುದಿಲ್ಲ. ಆದರೆ, ಆಲೂಗಡ್ಡೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಕಾರ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರೈತರು ಹೊರ ರಾಜ್ಯ, ಜಿಲ್ಲೆಗಳಿಂದ ಬಿತ್ತನೆ ಗಡ್ಡೆ ಖರೀದಿಸುತ್ತಿದ್ದಾರೆ. ಇಲಾಖೆ ಸಹಾಯಧನ ಅನರ್ಹರ ಕೈ ಸೇರುತ್ತಿದೆ. ಕಚೇರಿಯಲ್ಲಿನ ಕೆಳ ಹಂತದ ಸಿಬ್ಬಂದಿಯು ಅಧಿಕಾರಿಗಳನ್ನು ಕತ್ತಲಲ್ಲಿಟ್ಟು ರೈತರಲ್ಲದವರಿಂದ ಅರ್ಜಿ ಹಾಕಿಸಿ ಸಹಾಯಧನ ಮಂಜೂರು ಮಾಡುತ್ತಾರೆ. ಈ ಅಕ್ರಮದ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಆಲೂಗಡ್ಡೆ ಬೆಳೆಗಾರರಿಂದ ಬೆಳೆ ವಿಮೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ರೈತರು ಬೆಳೆ ವಿಮೆ ಮಾಡಿಸಿಲ್ಲ. ಬೆಳೆ ನಷ್ಟವಾದರೆ ತೊಂದರೆ ಅನುಭವಿಸುತ್ತಾರೆ’ ಎಂದರು.

‘ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡುವ ಪ್ರಮುಖ ಬೆಳೆಗಳಿಗೆ ಪರಿಹಾರ ಕಲ್ಪಿಸಲು ಬೆಳೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಈ ಬಗ್ಗೆ ಇಲಾಖೆಗಳು ವ್ಯಾಪಕ ಪ್ರಚಾರ ನಡೆಸಿವೆ. ಬೆಳೆ ನಷ್ಟ ಪರಿಹಾರ ಕಲ್ಪಿಸುವುದು ಜಿಲ್ಲಾಧಿಕಾರಿ ಅಧೀನದಲ್ಲಿ ಬರುತ್ತದೆ. ಈ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಪ್ರೋತ್ಸಾಹಧನ: ‘ಆಲೂಗಡ್ಡೆ ಬಿತ್ತನೆ ವೆಚ್ಚದ ಶೇ 50ರಂತೆ ಹೆಕ್ಟೇರ್‌ಗೆ ₹ 7,500 ಪ್ರೋತ್ಸಾಹಧನವನ್ನು ಗರಿಷ್ಠ 2 ಹೆಕ್ಟೇರ್‌ಗೆ ನೀಡಲಾಗುವುದು. ಜತೆಗೆ ಸಸ್ಯ ಸಂರಕ್ಷಣಾ ಔಷಧ ಖರೀದಿಗೆ ಪ್ರತಿ ಹೆಕ್ಟೇರ್‌ಗೆ ₹ 7,200 ನೀಡಲಾಗುತ್ತಿದ್ದು, ಒಟ್ಟು ₹ 14,700 ಕೊಡಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ ಮಾಹಿತಿ ನೀಡಿದರು.

‘ಆಲೂಗಡ್ಡೆ ಬೆಳೆಗಾರರಿಗೆ ಸಹಾಯಧನ ಕಲ್ಪಿಸಲು ಅರ್ಜಿ ಆಹ್ವಾನಿಸುತ್ತೇವೆ. ಇಲಾಖೆಯ ತಾಂತ್ರಿಕ ವಿಭಾಗದ ಸಿಬ್ಬಂದಿ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿ ಸಹಾಯಧನಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡುತ್ತಾರೆ. ಇದರಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸುತ್ತೇವೆ’ ಎಂದು ಹೇಳಿದರು.

ಮಾಹಿತಿ ನೀಡಿ: ‘ಮಂಜಿನಿಂದ ಆಲೂಗಡ್ಡೆ ಬೆಳೆ ಇಳುವರಿ ಕಡಿಮೆಯಾಗುತ್ತದೆ. ಬದಲಾಗುತ್ತಿರುವ ವಾತಾವರಣದಿಂದ ಚುಕ್ಕೆ ರೋಗ, ಎಲೆ ಕೊಳೆಯುವ ರೋಗ, ಕೀಟ ಬಾಧೆ ಸಮಸ್ಯೆ ಎದುರಾಗುತ್ತದೆ. ತೋಟಗಾರಿಕೆ ಇಲಾಖೆ ಸಿಬ್ಬಂದಿ ಆಗಾಗ್ಗೆ ರೈತರ ಜಮೀನಿಗೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಸಿಂಪಡಿಸಬೇಕಾದ ಕೀಟನಾಶಕಗಳ ಬಗ್ಗೆ ಮಾಹಿತಿ ನೀಡಬೇಕು. ಜತೆಗೆ ರೈತ ಸಂಪರ್ಕ ಕೇಂದ್ರ, ಹಾಪ್‌ಕಾಮ್ಸ್‌ನಲ್ಲಿ ಕೀಟನಾಶಕ ಲಭ್ಯವಾಗಬೇಕು’ ಎಂದು ಗೋವಿಂದಗೌಡ ಮನವಿ ಮಾಡಿದರು.

‘ಈಗಾಗಲೇ ಕೆಲ ರೈತರು ಬೆಳೆ ವಿಮೆ ಕಂತು ಪಾವತಿಸಿದ್ದಾರೆ. ಈ ಹಿಂದೆ ರೈತರಿಗೆ ಸರಿಯಾಗಿ ವಿಮೆ ಪರಿಹಾರ ಬಂದಿಲ್ಲ. ರೈತರು ನಿಗದಿತ ಬ್ಯಾಂಕ್‌ನಲ್ಲಿ ವಿಮೆ ಪಾವತಿ ಮಾಡುತ್ತಾರೆ. ಬೆಳೆ ನಷ್ಟವಾದಾಗ ಯಾರನ್ನು ಕೇಳಬೇಕೆಂದು ತಿಳಿಯುತ್ತಿಲ್ಲ. ಅಧಿಕಾರಿಗಳು ವಿಮಾ ಕಂಪನಿಯೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಬೇಕು’ ಎಂದು ಹೇಳಿದರು.

ಆಲೂಗಡ್ಡೆ ಬೆಳೆಗಾರರಾದ ಶಿವಕುಮಾರ್, ಕೃಷ್ಣೇಗೌಡ, ಶ್ರೀನಿವಾಸ್, ನರೇಶ್ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT