ಶನಿವಾರ, ನವೆಂಬರ್ 28, 2020
24 °C

ಓದುವ ಅಭ್ಯಾಸ ರೂಢಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜೀವನದಲ್ಲಿ ಪ್ರತಿಯೊಬ್ಬರೂ ಪುಸ್ತಕ ಓದುವ ಅಭ್ಯಾಸ ರೂಢಿಸಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯ’ ಎಂದು ಗರಟಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಿ.ಆರ್.ಅಶೋಕ್ ಹೇಳಿದರು.

ತಾಲ್ಲೂಕಿನ ಹರಟಿ ಗ್ರಾಮದಲ್ಲಿ ಗುರುವಾರ ನಡೆದ ‘ಓದುವ ಬೆಳಕು ಗ್ರಂಥಾಲಯ ಅಭಿಯಾನ’, ಸದಸ್ಯತ್ವ ಆಂದೋಲನ ಹಾಗೂ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿ, ‘ಕಾಲ, ದೇಶಗಳ ಮಿತಿಯಿಲ್ಲದೆ ಹಲವು ಅನುಭವಗಳ ಸಾರ ಪುಸ್ತಕಗಳಿಂದ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಪುಸ್ತಕಗಳು ಜ್ಞಾನ ಅಳಿಯದಂತೆ ರಕ್ಷಿಸಿ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುತ್ತವೆ. ಪುಸ್ತಕ ಓದುವ ಕಾರ್ಯ ನಿರಂತರವಾಗಬೇಕು. ಇದಕ್ಕೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಪೋಷಕರು ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕ ಓದುವ ಹವ್ಯಾಸ ನಶಿಸಿ ಹೋಗುತ್ತಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದ ಜನರು ಓದಿನತ್ತ ಗಮನ ಹರಿಸಬೇಕು. ಪುಸ್ತಕದ ಜ್ಞಾನದಿಂದ ಜೀವನದ ಕಲಿಕೆ ಸಾಧ್ಯ’ ಎಂದು ಹರಟಿ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ರಾಮಚಂದ್ರಪ್ಪ ತಿಳಿಸಿದರು.

‘ಪುಸ್ತಕಗಳ ಓದಿನಿಂದ ಬೌದ್ಧಿಕ ಪ್ರಜ್ಞೆ ಬೆಳೆಯುತ್ತದೆ. ಪುಸ್ತಕ ಪ್ರೇಮಿಯಾದವರು ಮಾನವೀಯ ಮೌಲ್ಯ ಬೆಳೆಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಗ್ರಂಥಾಲಯ ಮೇಲ್ವಿಚಾರಕ ವೆಂಕಟರಾವ್ ಅವರನ್ನು ಸನ್ಮಾನಿಸಲಾಯಿತು. ಸಹ ಶಿಕ್ಷಕರಾದ ಎಮ್ಮಾರ್ ಮೀನಾ, ಮಮತಾ, ಗೋವಿಂದಪ್ಪ, ಸೊಣ್ಣೇಗೌಡ, ಮಂಜುಳಾ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.