ಮಂಗಳವಾರ, ಮೇ 17, 2022
23 °C

ಮೂಲಸೌಕರ್ಯ ಕಲ್ಪಿಸಲು ಆದ್ಯತೆ: ಪುರಸಭೆ ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ಪಟ್ಟಣದ ನಾಗರಿಕರಿಗೆ ಮೂಲಸೌಕರ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸೌಲಭ್ಯ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್ ಹೇಳಿದರು.

ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೆ ತರುವಲ್ಲಿ ಎಲ್ಲ ಸದಸ್ಯರೂ ಸಹಕಾರ ನೀಡಬೇಕು. ಸಾಂಘಿಕ ಪ್ರಯತ್ನದ ಮೂಲಕ ಮಾದರಿ ಪಟ್ಟಣವನ್ನಾಗಿ ರೂಪಿಸಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ವಿ. ಮೋಹನ್ ಕುಮಾರ್ ಮಾತನಾಡಿ, ಪುರಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರು ತಮ್ಮ ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಪುರಸಭೆ ಕಾಯ್ದೆಗಳ ಜ್ಞಾನ ಪಡೆದುಕೊಳ್ಳಬೇಕು. ತಮ್ಮ ವಾರ್ಡ್‌ಗಳಲ್ಲಿನ ಸಮಸ್ಯೆ ಬಗ್ಗೆ ಸಭೆಯಲ್ಲಿ ಚರ್ಚಿ‌ಸಿ ಪರಿಹಾರ ಕಂಡುಕೊಳ್ಳಬೇಕು. ಪ್ರಜಾಪ್ರತಿನಿಧಿ ಕಾಯ್ದೆಯಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ವಿವಿಧ ಆರ್ಥಿಕ ಯೋಜನೆಗಳಲ್ಲಿ ಮಂಜೂರಾಗುವ ಹಣವನ್ನು ನಿಗದಿತ ಯೋಜನೆಗಳಲ್ಲಿ ತೊಡಗಿಸಬೇಕು. ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಸದಸ್ಯರಿಗೆ ಅಗತ್ಯ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಸದಸ್ಯ ಬಿ. ವೆಂಕಟರೆಡ್ಡಿ ಮಾತನಾಡಿ, ರಾಜಕೀಯ ಚುನಾವಣೆಗೆ ಸೀಮಿತವಾಗಬೇಕು. ಪಟ್ಟಣದ ಅಭಿವೃದ್ಧಿಗೆ ಎಲ್ಲ ಸದಸ್ಯರೂ ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯ ಒದಗಿಸುವಲ್ಲಿ ರಾಜಕೀಯ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಸದಸ್ಯ ಬಾಬಾಜಾನ್ ಮಾತನಾಡಿ, ಗಫಾರ್ ಖಾನ್ ಮೊಹಲ್ಲಾದಲ್ಲಿ ಕುಡಿಯುವ ನೀರಿಗೆ ನಿರ್ಮಿಸಲಾಗಿರುವ ಕೊಳವೆಬಾವಿಗೆ ಪಂಪ್‌ಸೆಟ್ ರಿಪೇರಿ ಮಾಡಿ ಅಳವಡಿಸದೆ ಬಿಲ್ ಮಾಡುವುದರ ಮೂಲಕ ಹಣ ದುರುಪಯೋಗ ಮಾಡಲಾಗಿದೆ ಎಂದು ದೂರಿದರು.

ಇದಕ್ಕೆ ಸಂಬಂಧಪಟ್ಟ ಸಿಬ್ಬಂದಿಯಿಂದ ಸೂಕ್ತ ಉತ್ತರ ಸಿಗದ ಕಾರಣ, ಮುಖ್ಯಾಧಿಕಾರಿ ಮೋಹನ್ ಕುಮಾರ್ ಮಧ್ಯಪ್ರವೇಶಿಸಿ, ಆ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

‘ಪುರಸಭೆ ಅಸ್ತಿತ್ವದಲ್ಲಿ ಇರದ ಸಂದರ್ಭದಲ್ಲಿ ಏನೆಲ್ಲಾ ನಡೆದಿದೆ ಎಂಬುದನ್ನು ಬದಿಗಿರಿಸಿ ಮುಂದೆ ಪುರಸಭೆ ಕೈಗೊಳ್ಳುವ ನಿರ್ಧಾರಗಳನ್ನು ಸರಿಯಾಗಿ ಜಾರಿಗೆ ತನ್ನಿ. ಯಾವುದೇ ನಿರ್ಲಕ್ಷ್ಯಕ್ಕೆ ಎಡೆಗೊಡಬೇಡಿ’ ಎಂದು ಸದಸ್ಯ ಬಿ. ವೆಂಕಟರೆಡ್ಡಿ
ಹೇಳಿದರು.

ಪಟ್ಟಣದಲ್ಲಿ ನೀರಿನ ಸೋರಿಕೆ ಹೆಚ್ಚಿದೆ. ಅಮೂಲ್ಯವಾದ ನೀರು ಪೋಲಾಗುತ್ತಿದ್ದೆ. ಸೋರಿಕೆ ತಡೆಯಲು ನೇಮಿಸಲಾಗಿರುವ ಇಬ್ಬರಿಂದ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ದೂರಿದರು. ಪೈಪ್‌ಗಳಲ್ಲಿ ನೀರು ಸೋರಿಕೆ ಮೂಲಕ ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಕನಿಷ್ಠ 6 ಮಂದಿಯನ್ನು ನೇಮಿಸಿಕೊಳ್ಳುವಂತೆ ಸಲಹೆ ಮಾಡಲಾಯಿತು.

ಸದಸ್ಯ ಭಾಸ್ಕರ್ ಮಾತನಾಡಿ, ಪಟ್ಟಣದಲ್ಲಿ ವಿದ್ಯುತ್ ಕಂಬಗಳ ಕೊರತೆಯಿಂದಾಗಿ ಬಹಳಷ್ಟು ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಾಗರಿಕರಿಗೆ ಹೆಚ್ಚಿನ ತೊಂದರೆಯಾಗಿದೆ ಎಂದು ಹೇಳಿದರು. ಸಮಸ್ಯೆ ಬಗೆಹರಿಸಲಾಗುವುದು ಎಂದು ಎಂಜಿನಿಯರ್ ಸುದರ್ಶನ್ ಭರವಸೆ ನೀಡಿದರು.

ಸಭೆಯಲ್ಲಿ ಸೂಚನಾ ಪತ್ರದಲ್ಲಿನ 27 ವಿಷಯಗಳನ್ನು ಓದಿ, ಚರ್ಚಿಸಿದ ಬಳಿಕ ಅಂಗೀಕರಿಸಲಾಯಿತು. ಪುರಸಭೆ ಉಪಾಧ್ಯಕ್ಷೆ ಆಯಿಷಾ ನಯಾಜ್, ಆರೋಗ್ಯ ನಿರೀಕ್ಷಕ ಕೆ.ಜಿ. ರಮೇಶ್, ಪರಿಸರ ಎಂಜಿನಿಯರ್ ಡಿ. ಶೇಖರ್ ರೆಡ್ಡಿ, ಸಿಇಒ ರಾಜೇಶ್ವರಿ, ನಾಗೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು