ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ: ಎಂ. ಸೀನಪ್ಪ

ಧರ್ಮಸ್ಥಳ ಯೋಜನೆಯಡಿ ಸ್ವಸಹಾಯ ಸಂಘ ಉದ್ಘಾಟನೆ
Last Updated 23 ಜುಲೈ 2021, 3:40 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲಿ ಬಡತನ ನಿರ್ಮೂಲನೆ ಮಾಡಿ ಮಹಿಳೆಯರ ಸಬಲೀಕರಣಗೊಳಿಸುವಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಸಂಸ್ಥೆ ಶ್ರಮಿಸುತ್ತಿದೆ ಎಂದು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಎಂ. ಸೀನಪ್ಪ ತಿಳಿಸಿದರು.

ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ ಕೋಲಾರ ತಾಲ್ಲೂಕಿನ 5005ನೇ ಮಹಿಳಾ ಸ್ವಸಹಾಯ ಸಂಘ ಉದ್ಘಾಟಿಸಿ ಮಾತನಾಡಿ, ಸಂಸ್ಥೆ 50 ಲಕ್ಷ ಸದಸ್ಯರನ್ನು ಸಂಘಟಿಸಿ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದೆಎಂದರು.

164 ಹೋಬಳಿಗಳಲ್ಲಿ ವಿವಿಧ ಬಗೆಯ ಕೃಷಿ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆ ನೀಡುವ ಮೂಲಕ ರೈತ ಸಂಪರ್ಕ ಕೇಂದ್ರಗಳ ಮಾದರಿಯಲ್ಲಿ ಕೆಲಸ ನಿರ್ವಹಿಸುತ್ತಿದೆ. ರಾಜ್ಯಮಟ್ಟದಲ್ಲಿ ಕೃಷಿ ಮೇಳ, ಕೃಷಿ ಅಧ್ಯಯನ ಪ್ರವಾಸ, ಸಸಿ ವಿತರಣೆ ಸೇರಿದಂತೆ ವಿವಿಧ ಯೋಜನೆ ರೂಪಿಸಿ ಕೃಷಿ ಸ್ನೇಹಿಯಾಗಿಯೂ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ₹ 30 ಕೋಟಿ ವೆಚ್ಚದಲ್ಲಿ 360 ಕೆರೆಗಳನ್ನು ಪುನಶ್ಚೇತನ ಮಾಡಲಾಗಿದೆ. ವಿಕಲಚೇತನರಿಗೆ ಚೀಲ್‌ಚೇರ್ ಸೇರಿದಂತೆ ವಿವಿಧ ಸೌಲಭ್ಯ, ಸ್ವಸಹಾಯ ಸಂಘದ 12,500 ಸದಸ್ಯರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿಮಾಹೆ ಶಿಷ್ಯವೇತನ, ವಾತ್ಸಲ್ಯ ಸಂಘಗಳಿಗೆ ಪೌಷ್ಟಿಕ ಆಹಾರದ ಕಿಟ್, ಸ್ವಸಹಾಯ ಸಂಘಗಳಿಗೆ ನೀಡಿರುವ 13 ಸಾವಿರ ಕೋಟಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ 1,496 ಮದ್ಯವರ್ಜನ ಶಿಬಿರದ ಮೂಲಕ 1.36 ಲಕ್ಷ ಮಂದಿಗೆ ಮರುಜೀವನದ ಅವಕಾಶ ಕಲ್ಪಿಸಿದೆ. ಕೊರೊನಾ ಸಂದರ್ಭ ಸರ್ಕಾರದೊಂದಿಗೆ ಕೈ ಜೋಡಿಸಿ 300 ಆಂಬುಲೆನ್ಸ್, 302 ಆಮ್ಲಜನಕ ಸಾಂದ್ರಕ, ಬಡಜನತೆಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದರು.‌

ರಾಜ್ಯದಲ್ಲಿ 1,500 ದೇವಾಲಯ ಗಳ ಜೀರ್ಣೋದ್ಧಾರ, ಮಹಿಳಾ ಸಬಲೀಕರಣಗೊಳಿಸಲು ಜ್ಞಾನ ವಿಕಾಸ ಕೇಂದ್ರ ತೆರೆದು ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ಸುಮಾರು ₹ 2 ಸಾವಿರ ಕೋಟಿ ಉಳಿತಾಯ ಮಾಡಿವೆ. ಜಿಲ್ಲೆಯಲ್ಲಿ ₹ 15 ಕೋಟಿ ಉಳಿತಾಯ ಮಾಡಿವೆ. ರಾಜ್ಯದಲ್ಲಿ ಸಂಸ್ಥೆಯ ಸಂಘಗಳು ₹ 620 ಕೋಟಿ ಲಾಭಾಂಶ ಗಳಿಸಿವೆ. ಜಿಲ್ಲೆಯಲ್ಲಿ ₹ 4 ಕೋಟಿ ಲಾಭ ಗಳಿಸಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಶೋಭಿತಾ ಮಾತನಾಡಿ, ನಾನು ವಿದ್ಯಾರ್ಥಿ ದೆಸೆಯಿಂದಲೂ ಈ ಸಂಸ್ಥೆಯ ಪ್ರಗತಿದಾಯಕ ಸಾಮಾಜಿಕ ಸೇವಾ ಕಾರ್ಯಗಳನ್ನು ಗಮನಿಸಿದ್ದೇನೆ. ಕೋವಿಡ್ ಸಂದರ್ಭದಲ್ಲೂ ಪಿಂಚಣಿ ವಿತರಣಾ ಯೋಜನೆ ಜಾರಿ ಮಾಡುವ ಮೂಲಕ ಸಂಸ್ಥೆ ಬಡವರ ಬಗ್ಗೆ ಕಾಳಜಿ ವಹಿಸಿದೆ ಎಂದರು.

ಜನಜಾಗೃತಿ ಸಂಸ್ಥೆಯ ಸದಸ್ಯೆ ಅರುಣಮ್ಮ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು ಮಾತನಾಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ಜಿಲ್ಲಾ ಯೋಜನಾಧಿಕಾರಿ ಎಸ್. ರಾಮ್, ಪೂಜಾರಿ, ತಾಲ್ಲೂಕು ಯೋಜನಾಧಿಕಾರಿ ಎಸ್. ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT