ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಬೆಲೆ ಕುಸಿತ, ನಷ್ಟ ಪರಿಹಾರಕ್ಕೆ ಕ್ರಮ: ಸಚಿವ ಪಾಟೀಲ್ ಭರವಸೆ

ಅಧಿಕಾರಿಗಳ ಸಭೆಯಲ್ಲಿ ಕೃಷಿ ಸಚಿವ ಭರವಸೆ
Last Updated 13 ಏಪ್ರಿಲ್ 2020, 15:19 IST
ಅಕ್ಷರ ಗಾತ್ರ

ಕೋಲಾರ: ‘ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆ ನಡೆಸಲು ಯಾವುದೇ ನಿರ್ಬಂಧವಿಲ್ಲ. ಮುಖ್ಯಮಂತ್ರಿಗಳ ಜತೆ ಚರ್ಚಿಸಿ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಭರವಸೆ ನೀಡಿದರು.

ಇಲ್ಲಿ ಸೋಮವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿನ ಕಾರಣಕ್ಕೆ ಜಾರಿಯಾಗಿರುವ ದಿಗ್ಬಂಧನದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೆಲೆ ಕುಸಿತದಿಂದ ಆಗಿರುವ ನಷ್ಟ ತುಂಬಿಸಲು ಸರ್ಕಾರ ಸಿದ್ಧವಿದೆ’ ಎಂದರು.

‘ಜಿಲ್ಲೆಯಲ್ಲಿ ಟೊಮೆಟೊ, ಕ್ಯಾಪ್ಸಿಕಂ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಕಟಾವಿಗೆ ಬಂದಿವೆ. ದಿಗ್ಬಂಧನದ ಪರಿಸ್ಥಿತಿಯಿಂದ ರೈತರಿಗೆ ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ. ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು.

‘ಹಾಪ್‌ಕಾಮ್ಸ್‌ ನಿಗದಿಪಡಿಸುವ ದರದಲ್ಲೇ ರೈತರಿಂದ ತರಕಾರಿ ಖರೀದಿಸಬೇಕು. ಜಿಲ್ಲೆಯ ರೈತರು ಬೇಡಿಕೆಗಿಂತಲೂ ಹೆಚ್ಚು ತರಕಾರಿ ಬೆಳೆಯುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಜತೆಗೆ ವಿದೇಶಕ್ಕೂ ತರಕಾರಿ ರಫ್ತಾಗುತ್ತಿದೆ. ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ತರಕಾರಿ ಕಳುಹಿಸಲು ಅನುಕೂಲವಾಗುವಂತೆ ರೈಲು ಸೇವೆ ಕಲ್ಪಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ’ ಎಂದು ಹೇಳಿದರು.

‘ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೇಳಿದ ಬೆಲೆಗೆ ರೈತರು ತರಕಾರಿ ಕೊಡಬೇಕಿದೆ. ಇದಕ್ಕೆ ಒಪ್ಪದಿದ್ದರೆ ದಲ್ಲಾಳಿಗಳು ಹರಾಜು ಕೂಗುವುದೇ ಇಲ್ಲ. ಮಾರುಕಟ್ಟೆಯಲ್ಲಿ ನಾನೇ ಖುದ್ದು ರೈತರಿಂದ ವಿವಿಧ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿದ್ದೇನೆ. ರಾಜ್ಯದ ಇತರೆ ಜನಪ್ರತಿನಿಧಿಗಳು ಇದೇ ರೀತಿ ಮಾಡಿದರೆ ರೈತರ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

ನಿರ್ಬಂಧ ಸಡಿಲ: ‘ಲಾಕ್‌ಡೌನ್‌ ಜಾರಿಯಲ್ಲಿದ್ದರೂ ರೈತರ ಹಿತದೃಷ್ಟಿಯಿಂದ ಕೆಲ ನಿರ್ಬಂಧ ಸಡಿಲಗೊಳಿಸಿದ್ದೇವೆ. ಜಿಲ್ಲೆಯಿಂದ ಬಹುತೇಕ ತರಕಾರಿ ಬೆಂಗಳೂರಿಗೆ ಬರುತ್ತಿದೆ. ಮಂಡಿ ಮಾಲೀಕರು ರೈತರಿಂದ ನೇರವಾಗಿ ಖರೀದಿ ಮಾಡುವ ವ್ಯವಸ್ಥೆ ಕಲ್ಪಿಸಿ’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

‘ಕೃಷಿ, ತೋಟಗಾರಿಕೆ ಚಟುವಟಿಕೆಗಳು ಚುರುಕಾಗಿ ನಡೆಯಬೇಕು. ಮುಂಗಾರು ಸಂದರ್ಭದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಬೇಕು. ಜಿಲ್ಲೆಯಲ್ಲೆ ಮಾವು ಹೆಚ್ಚಾಗಿ ಬೆಳೆಯುವುದರಿಂದ ಬೇರೆಡೆಯಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುತ್ತೇವೆ. ಕೊರೊನಾ ಸೋಂಕಿಗೂ ಮಾವಿಗೂ ಯಾವುದೇ ಸಂಬಂಧವಿಲ್ಲ’ ಎಂದು ತಿಳಿಸಿದರು.

ಬೆಲೆ ದುಬಾರಿ: ‘ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದುಬಾರಿಯಾಗಿದ್ದರೂ ಇದರ ಲಾಭ ರೈತರಿಗೆ ಸಿಗುತ್ತಿಲ್ಲ. ಬದಲಿಗೆ ಮಧ್ಯವರ್ತಿಗಳು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಹಕರು ರೈತರಿಂದ ನೇರವಾಗಿ ತರಕಾರಿ ಕೊಂಡುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ವಿಧಾನ ಪರಿಷತ್‌ ಸದಸ್ಯ ಆರ್.ಚೌಡರೆಡ್ಡಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಕಾರ್ತಿಕ್‌ರೆಡ್ಡಿ, ಮಹಮ್ಮದ್‌ ಸುಜಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT