ಬಂಗಾರಪೇಟೆ: ಜಾತಿ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನ್ನಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಆರ್.ಆರ್. ನಗರ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಹೂವರಸನಹಳ್ಳಿ ರಾಜಪ್ಪ ಒತ್ತಾಯಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಕಚೇರಿ ಎದುರು ಬುಧವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಲಂಚಕ್ಕಾಗಿ ಗುತ್ತಿಗೆದಾರರನ್ನು ಪೀಡಿಸುವ ಜೊತೆಗೆ ಮಹಿಳೆಯರು ಬಳಸುವ ವಸ್ತುಗಳಂತೆ ಮಾತಾಡಿದ್ದಾರೆ. ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು. ಜೊತೆಗೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಗುತ್ತಿಗೆದಾರನ ಬಳಿ ಮಾತನಾಡುವಾಗ ಕೊಲೆ ಬೆದರಿಕೆ, ಲಂಚಕ್ಕೆ ಬೇಡಿಕೆ ಇಡುವಾಗ ಪರಿಶಿಷ್ಟ ಸಮುದಾಯದ ಬಗ್ಗೆ ಆಡಿದ್ದಾರೆ ಎನ್ನಲಾದ ಮಾತುಗಳು ನೋವು ಹಾಗೂ ಆಕ್ರೋಶ ತರಿಸಿವೆ. ಶಾಸಕ ಮುನಿರತ್ನ ಅವರ ಈ ನಡೆಯನ್ನು ಪಕ್ಷಾತೀತವಾಗಿ ಖಂಡಿಸಬೇಕು. ಅದುಬಿಟ್ಟು ಆತನನ್ನು ಸಮರ್ಥಿಸಿಕೊಳ್ಳುವುದು ದಲಿತ ಮತ್ತು ಮಹಿಳೆಯರಿಗೆ ಮಾಡುವ ಮಹಾದ್ರೋಹ. ಅವರನ್ನು ಗಡಿಪಾರು ಮಾಡದಿದ್ದರೆ, ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಸಿದ್ದನಹಳ್ಳಿ ಯಲ್ಲಪ್ಪ ಮಾತನಾಡಿ, ‘ಬಿಜೆಪಿ ಶಾಸಕ ಮುನಿರತ್ನ ಜಾತಿ ನಿಂದನೆ ಮಾಡಿದ್ದಲ್ಲದೆ, ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಬಿಜೆಪಿಯ ಒಕ್ಕಲಿಗ ಹಾಗೂ ದಲಿತ ಸಮುದಾಯದ ನಾಯಕರು ಏಕೆ ಬಾಯಿ ಮುಚ್ಚಿಕೊಂಡಿದ್ದೀರಿ. ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಮಂಚಕ್ಕೆ ಕರೆಯುವ ಮನಿರತ್ನನ ವಿರೋಧಿಸಲಾಗದಷ್ಟು ಸ್ವಾಭಿಮಾನ ಕಳೆದುಕೊಂಡಿರುವಿರಾ. ಬಿಜೆಪಿಯ ದಲಿತ ನಾಯಕರು ಧ್ವನಿ ಕಳೆದುಕೊಂಡಿರುವಿರಾ. ಸಮುದಾಯದ ಹಿತ ಕಾಯುವ ಬದ್ಧತೆಯೂ ನಿಮಗೆ ಇಲ್ಲವೇ’ ಎಂದು ಪ್ರಶ್ನಿಸಿದರು.