ಮಂಗಳವಾರ, ಜನವರಿ 26, 2021
16 °C

8ಕ್ಕೆ ಕೆಎಂಎಫ್‌ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹಾಲು ಖರೀದಿ ದರ ಇಳಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಜ.8ರಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯಿಂದ ಸಂಘಟನೆಯ ಸುಮಾರು 500 ಕಾರ್ಯಕರ್ತರು ಭಾಗಿಯಾಗುತ್ತಾರೆ’ ಎಂದು ಕರ್ನಾಟಕ ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಹೇಳಿದರು.

ಇಲ್ಲಿ ಮಂಗಳವಾರ ನಡೆದ ಸಂಘಟನೆಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌–19 ಪರಿಸ್ಥಿತಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಕೆಎಂಎಫ್‌ ಹಾಲು ಖರೀದಿ ದರ ಕಡಿಮೆ ಮಾಡಿದೆ’ ಎಂದು ಕಿಡಿಕಾರಿದರು.

‘ಕೃಷಿ ಪ್ರಧಾನ ರಾಜ್ಯದಲ್ಲಿ ಹೈನೋದ್ಯಮವು ರೈತರ ಬೆನ್ನೆಲುಬು. ರೈತರು ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಆದರೆ, ಕೆಎಂಎಫ್‌ ಆಡಳಿತ ಮಂಡಳಿಯು ನಷ್ಟದ ಸಬೂಬು ಹೇಳಿ ಹಾಲು ಖರೀದಿ ದರ ಪರಿಷ್ಕರಣೆಗೆ ಮೀನಮೇಷ ಎಣಿಸುತ್ತಿದೆ’ ಎಂದು ದೂರಿದರು.

‘ಒಂದು ಲೀಟರ್ ಹಾಲು ಉತ್ಪಾದನೆಗೆ ಅಂದಾಜು ₹ 35 ವೆಚ್ಚವಾಗುತ್ತಿದೆ. ಆದರೆ, ಕೆಎಂಎಫ್‌ ಉತ್ಪಾದನಾ ವೆಚ್ಚಕಿಂತಲೂ ಕಡಿಮೆ ದರಕ್ಕೆ ಹಾಲು ಖರೀದಿಸಿ ರೈತರನ್ನು ಶೋಷಿಸುತ್ತಿದೆ. ಮತ್ತೊಂದೆಡೆ ರಾಜ್ಯದೆಲ್ಲೆಡೆ ಹಾಲು ಒಕ್ಕೂಟಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಆದಾಯ ಸೋರಿಕೆಯಾಗುತ್ತಿದೆ’ ಎಂದು ಆರೋಪಿಸಿದರು.

ಕಾಳಜಿಯಿಲ್ಲ: ‘ದೇಶದ ಸಂಪತ್ತು ಲೂಟಿ ಮಾಡುವ ಲೂಟಿಕೋರರನ್ನು ಸರ್ಕಾರಗಳು ರಕ್ಷಿಸುತ್ತವೆ. ಆದರೆ, ದೇಶಕ್ಕೆ ಆರ್ಥಿಕ ಸಂಪನ್ಮೂಲ ಕಲ್ಪಿಸುವ ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದರೂ ಸರ್ಕಾರಗಳು ನೆರವಿಗೆ ಧಾವಿಸುವುದಿಲ್ಲ. ಸರ್ಕಾರಗಳಿಗೆ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜ.8ರಂದು ಬೆಳಿಗ್ಗೆ 7:30ಕ್ಕೆ ಜಿಲ್ಲೆಯಿಂದ ಸಂಘಟನೆ ಕಾರ್ಯಕರ್ತರನ್ನು ಬೆಂಗಳೂರಿಗೆ ಕರೆದೊಯ್ಯಲಾಗುತ್ತದೆ. ಪ್ರತಿಭಟನೆ ಬಳಿಕ ಕೆಎಂಎಫ್‌ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಹಾಲು ಖರೀದಿ ದರ ಹೆಚ್ಚಿಸುವಂತೆ ಕೋರುತ್ತೇವೆ’ ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮುನಿವೆಂಕಟಪ್ಪ, ಉಪಾಧ್ಯಕ್ಷ ಎಚ್.ವಿ.ಶ್ರೀಧರ್, ಸದಸ್ಯರಾದ ಪಾಷಾ, ಅಮಾನುಲ್ಲಾ ನವಾಜ್, ಸಾದಿಕ್‌ ಪಾಷಾ, ನವಾಜ್ ಅಹಮ್ಮದ್‌, ಆನಂದಪ್ಪ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.