ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಅಧ್ಯಕ್ಷರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಚೀನಾ ರೇಷ್ಮೆ ಆಮದು ನಿರ್ಬಂಧಕ್ಕೆ ರೈತ ಸಂಘ ಸದಸ್ಯರ ಒತ್ತಾಯ
Last Updated 3 ಜುಲೈ 2020, 16:55 IST
ಅಕ್ಷರ ಗಾತ್ರ

ಕೋಲಾರ: ಚೀನಾ ರೇಷ್ಮೆ ಆಮದು ನಿರ್ಬಂಧಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಶುಕ್ರವಾರ ರೇಷ್ಮೆಗೂಡು ಮಾರುಕಟ್ಟೆ ಎದುರು ಪ್ರತಿಭಟನೆ ಮಾಡಿದರು.

ಚೀನಾ ಅಧ್ಯಕ್ಷ ಷಿ.ಜಿನ್‌ಪಿಂಗ್‌ರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಚೀನಾದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಚೀನಾ ದೇಶಕ್ಕೆ ಜಾಗತಿಕಾಗಿ ಎಲ್ಲಾ ಜನರೂ ಹಿಡಿಶಾಪ ಹಾಕುತ್ತಿದ್ದಾರೆ. ಕೋಟ್ಯಂತರ ಜನರ ಜೀವದ ಜತೆ ಚೆಲ್ಲಾಟವಾಡಿರುವ ಚೀನಾ ವಿರುದ್ಧ ಜಾಗತಿಕವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೂ ಚೀನಾ ತನ್ನ ನರಿ ಬುದ್ಧಿ ಬಿಟ್ಟಿಲ್ಲ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಕಿಡಿಕಾರಿದರು.

‘ಜಿಲ್ಲೆ ಸೇರಿದಂತೆ ದೇಶದೆಲ್ಲೆಡೆ ರೇಷ್ಮೆ ಗೂಡಿನ ಬೆಲೆ ಗಣನೀಯವಾಗಿ ಕುಸಿದಿದೆ. ಇದಕ್ಕೆ ಚೀನಾದಿಂದ ಭಾರತಕ್ಕೆ ರೇಷ್ಮೆ ಆಮದು ಮಾಡಿಕೊಳ್ಳುತ್ತಿರುವುದು ಮುಖ್ಯ ಕಾರಣ. ಕೇಂದ್ರ ಸರ್ಕಾರ ಚೀನಾದ 59 ಆ್ಯಪ್‌ಗಳನ್ನು ದೇಶದಲ್ಲಿ ನಿಷೇಧ ಮಾಡಿರುವಂತೆಯೇ ಚೀನಾ ರೇಷ್ಮೆ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು’ ಎಂದು ಮನವಿ ಮಾಡಿದರು.

ವಲಸೆ ಹೋಗುತ್ತಿದ್ದಾರೆ: ‘ಜಿಲ್ಲೆಯ ರೈತರು ಬಡ್ಡಿ ಸಾಲ ಮಾಡಿ ರೇಷ್ಮೆ ಬೆಳೆದಿದ್ದಾರೆ. ರೇಷ್ಮೆಗೂಡಿನ ಬೆಲೆ ಕುಸಿತದಿಂದ ರೇಷ್ಮೆ ಬೆಳೆಗಾರರು ಹಾಗೂ ನೂಲು ಬಿಚ್ಚಾಣಿಕೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಖರೀದಿಸುವವರು ಇಲ್ಲದೆ ರೈತರಿಗೆ ದಿಕ್ಕು ತೋಚದಂತಾಗಿದೆ. ಸಾಕಷ್ಟು ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಿ ಪಟ್ಟಣ ಹಾಗೂ ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

‘ರೇಷ್ಮೆ ಬೆಳೆಗಾರರ ಸಮಸ್ಯೆ ಶಾಶ್ವತವಾಗಿ ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ. ಚೀನಾ ರೇಷ್ಮೆ ಆಮದು ಕೂಡಲೇ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಸದಸ್ಯರಾದ ಕಾವ್ಯಾಂಜಲಿ, ಆಂಜಿನಪ್ಪ, ಮಂಜುನಾಥ್, ಮೂರ್ತಿ, ವೇಣು, ನವೀನ್, ಪ್ರತಾಪ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT