ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಟಿಸಿಎಲ್‌: ಸಮಗ್ರ ತಿದ್ದುಪಡಿಗೆ ಒತ್ತಾಯ

Last Updated 17 ಸೆಪ್ಟೆಂಬರ್ 2021, 16:15 IST
ಅಕ್ಷರ ಗಾತ್ರ

ಕೋಲಾರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಪರಭಾರೆ ನಿಷೇಧ ಕಾಯ್ದೆಗೆ (ಪಿಟಿಸಿಎಲ್‌) ಸಮಗ್ರ ತಿದ್ದುಪಡಿ ತರುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಸ್ಥಾಪಿತ) ಸದಸ್ಯರು ಇಲ್ಲಿ ಶುಕ್ರವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದರು.

‘ಸರ್ಕಾರ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿ ಉಳಿಸದಿದ್ದರೆ ದಲಿತ ಸಂಘಟನೆಗಳಿಂದ ದೊಡ್ಡ ಮೊಟ್ಟದ ಹೋರಾಟ ಎದುರಿಸಬೇಕಾಗುತ್ತದೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

‘ದಲಿತರ ಭೂಮಿ ಬಲಾಢ್ಯರ ಪಾಲಾಗುವುದನ್ನು ತಪ್ಪಿಸಲು ದೇವರಾಜ ಅರಸು ಮತ್ತು ಬಿ.ಬಸವಲಿಂಗಪ್ಪ ಅವರು ದಲಿತಪರ ಕಾಳಜಿಯಿಂದ ಭೂ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದರು. ಕಾಯ್ದೆಯ ಲೋಪಗಳನ್ನೇ ಮುಂದಿಟ್ಟುಕೊಂಡು ಸರ್ಕಾರ ಆದೇಶಗಳನ್ನು ಹೊರಡಿಸುತ್ತಿದೆ’ ಎಂದು ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಎನ್‌.ಮುನಿಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಭೂ ಪರಭಾರೆ ನಿಷೇದ ಕಾಯ್ದೆ, ಉಳುವವನೇ ಭೂಮಿಯ ಒಡೆಯ, ಭೂ ಮಂಜೂರಾತಿ ಕಾಯ್ದೆ, ಮಲ ಹೊರುವ ಪದ್ಧತಿ ಮತ್ತು ಜೀತ ಪದ್ಧತಿ ನಿಷೇದ ಕಾಯ್ದೆಯ ಫಲವಾಗಿ ರಾಜ್ಯದಲ್ಲಿ ದಲಿತರು, ಹಿಂದುಳಿದ ಭೂಹೀನ ರೈತರು ಭೂ ಒಡೆಯರಾದರು. ಆದರೆ, ಈಗ ಭೂ ಕಾಯ್ದೆಗಳು ದಲಿತರ, ದಮನಿತರ ಪರ ನಿಲ್ಲುವ ಬದಲು ಬಲಾಢ್ಯರ ಪರವಾಗಿ ಜಾರಿಯಾಗುತ್ತಿವೆ’ ಎಂದು ಹೇಳಿದರು.

ಕಾಳಜಿಯಿಲ್ಲ: ‘ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಲಿತರ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದೆ ಬಿದ್ದು ಹೋಗುತ್ತಿವೆ. ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ಸರ್ಕಾರಕ್ಕೆ ದಲಿತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಪಿಟಿಸಿಎಲ್‌ ಪ್ರಕರಣಗಳ ಇತ್ಯರ್ಥಕ್ಕೆ ಪ್ರತ್ಯೇಕ ನ್ಯಾಯಾಲಯ ಸ್ಥಾಪಿಸಬೇಕು. ದಲಿತರ ಸ್ಮಶಾನಗಳಿಗೆ ಸರ್ಕಾರವೇ ಜಮೀನು ಖರೀದಿಸಿ ಕೊಡಬೇಕು. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ವಸತಿರಹಿತರಿಗೆ ಅಕ್ರಮ ಸಕ್ರಮದಡಿ ಹಕ್ಕುಪತ್ರ ನೀಡಬೇಕು. ತೋಟಿ, ತಲಾರಿ, ನೀಲಗಂಟಿ, ಶಾನುಭೋಗ, ದೇವರಮಾನ್ಯ ಮರು ಮಂಜೂರಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್‌, ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ಎಚ್.ಮುನಿಚೌಡಪ್ಪ, ಸದಸ್ಯರಾದ ವೆಂಕಟರವಣಪ್ಪ, ಸಂಪತ್‌ಕುಮಾರ್, ವೆಂಕಟೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT