ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಮಳೆ ಅನಾಹುತ: ಬೆಳೆ ಪರಿಹಾರಕ್ಕೆ ಮನವಿ

ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಮ್ಮ ಕೋಲಾರ ರೈತ ಸಂಘದ ಸದಸ್ಯರ ಅಸಮಾಧಾನ
Last Updated 4 ಜನವರಿ 2022, 15:58 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ಕೊಡುವಂತೆ ಒತ್ತಾಯಿಸಿ ನಮ್ಮ ಕೋಲಾರ ರೈತ ಸಂಘದ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

‘ಜಿಲ್ಲೆಯು ಕೃಷಿಗೆ ಹೆಸರುವಾಸಿಯಾಗಿದೆ. ಕೋವಿಡ್‌ ಹಾಗೂ ಲಾಕ್‌ಡೌನ್‌ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದರು. ಈ ನಡುವೆ ಧಾರಾಕಾರ ಮಳೆಯಿಂದ ತೋಟಗಾರಿಕೆ ಹಾಗೂ ಕೃಷಿ ಬೆಳೆಗಳು ಸಂರ್ಪೂಣ ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಂಘದ ಸದಸ್ಯರು ಹೇಳಿದರು.

‘ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಸಂಭವಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಜಿಲ್ಲೆಯತ್ತ ತಿರುಗಿ ನೋಡಿಲ್ಲ. ರೈತರ ಸಮಸ್ಯೆಗೆ ಸ್ಪಂದಿಸದೆ ನಾಪತ್ತೆಯಾಗಿರುವ ಉಸ್ತುವಾರಿ ಸಚಿವರಿಗೆ ಜಿಲ್ಲೆ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಬೆಳೆಗಳು ನಾಶವಾಗಿವೆ. ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸೇವಕರು ಬೆಳೆ ನಷ್ಟದ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ ಬಳಿಕ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೇಳಿತ್ತು. ಹೀಗಾಗಿ ರೈತರು ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ಕೆಲ ರೈತರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ’ ಎಂದು ದೂರಿದರು.

ಫೋಟೊ ಕೇಳುತ್ತಿದ್ದಾರೆ: ‘ತಹಶೀಲ್ದಾರ್‌ಗಳು ಪರಿಹಾರ ಹಣ ವಿತರಣೆಗೆ ಜಮೀನುಗಳಲ್ಲಿ ಹಾಳಾದ ಬೆಳೆಗಳ ಫೋಟೊ ಕೇಳುತ್ತಿದ್ದಾರೆ. ಬೆಳೆ ಹಾಳಾಗಿ ತಿಂಗಳು ಕಳೆದ ನಂತರ ಫೋಟೊ ಕೇಳಿದರೆ ನೀಡಲು ಹೇಗೆ ಸಾಧ್ಯ? ಬೆಳೆ ಪರಿಹಾರ ವಿತರಣೆಗೆ ಎದುರಾಗಿರುವ ತಾಂತ್ರಿಕ ದೋಷ ಸರಿಪಡಿಸಿ ಪ್ರತಿ ರೈತರಿಗೂ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ಸದಸ್ಯರು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಬೆಳೆ ನಷ್ಟದ ಸಮೀಕ್ಷೆ ನಡೆಸಲು ರೈತರಿಗೆ ಅವಕಾಶ ನೀಡಲಾಗಿತ್ತು. ಮೊಬೈಲ್ ಆ್ಯಪ್‌ ಮೂಲಕ ಬೆಳೆ ನಷ್ಟದ ಮಾಹಿತಿ ದಾಖಲಿಸಿರುವ ರೈತರ ಬ್ಯಾಂಕ್ ಖಾತೆಗೆ ಈಗಾಗಲೇ ಪರಿಹಾರದ ಜಮಾ ಆಗಿದೆ. ಪಹಣಿ ಇಲ್ಲದಿದ್ದರೂ ಕೆಲ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಪರಿಹಾರ ಧನ ಬಿಡುಗಡೆ ಮಾಡುತ್ತೇವೆ’ ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ವಿಶ್ವನಾಥ್‌ಗೌಡ, ಗೌರವಾಧ್ಯಕ್ಷ ಕೆ.ಬಿ.ಮುನಿವೆಂಕಟಪ್ಪ, ಸದಸ್ಯರಾದ ಹರೀಶ್, ನಾಗೇಶ್, ಬಾಬು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT