ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಅನಾರೋಗ್ಯದ ತಾಣವಾದ ರಾಜಕಾಲುವೆ

Published 22 ಡಿಸೆಂಬರ್ 2023, 5:41 IST
Last Updated 22 ಡಿಸೆಂಬರ್ 2023, 5:41 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಪಟ್ಟಣದ ಹೊರವಲಯದಿಂದ ಅಮಾನಿಕೆರೆಗೆ ಮಳೆ ನೀರು ಹರಿಸುವ ಪುರಾತನ ರಾಜಕಾಲುವೆ, ಪುರಸಭೆ ಹಾಗೂ ನಾಗರಿಕರ ನಿರ್ಲಕ್ಷ್ಯದ ಪರಿಣಾಮವಾಗಿ ಕೊಳೆತು ನಾರುತ್ತಿದ್ದು, ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಿದೆ.

ವೆಂಕಟೇಶ್ವರ ಬಡಾವಣೆ ಮೂಲಕ ಹಾದುಹೋಗುವ ಈ ರಾಜಕಾಲುವೆ, ಉದ್ದಕ್ಕೂ ಒತ್ತುವರಿಗೆ ಒಳಗಾಗಿದೆ. ಹಿಂದೆ ದೊಡ್ಡದಾಗಿದ್ದ ರಾಜಕಾಲುವೆಯಲ್ಲಿ ಅಗಾಧ ಪ್ರಮಾಣದ ಮಳೆ ನೀರು ಕೆರೆಗೆ ಹರಿದು ಹೋಗುತ್ತಿತ್ತು. ಈಗ ಒತ್ತುವರಿ ಪರಿಣಾಮವಾರಿ ಕಾಲುವೆ ಕಿರಿದಾಗಿದ್ದು ಹೂಳು ತುಂಬಿ, ಗಿಡಗೆಂಟೆ ಬೆಳೆದು ನಿಂತಿವೆ. ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ಬಡಾವಣೆಯ ಮನೆಗಳಿಗೆ ನುಗ್ಗುತ್ತಿದೆ.

ಮಳೆಗಾಲದಲ್ಲಿ ಕಾಲುವೆ ತುಂಬಿ ಪಕ್ಕದ ಮನೆಗಳಿಗೆ ಕೊಳಚೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ನೀರಿನೊಂದಿಗೆ ಹಾವುಗಳು ಮನೆಹೊಕ್ಕ ಉದಾಹರಣೆಯೂ ಇದೆ. ಕಾಲುವೆ ಇಕ್ಕೆಲಗಳಲ್ಲಿ ನಿವಾಸಿಗಳು ಕಸಕಡ್ಡಿ ರಾಶಿ ಹಾಕಿದ್ದಾರೆ. ಕಾಲುವೆಯಲ್ಲಿ ಕೊಳೆಯುತ್ತಿರುವ ನೀರಿನಿಂದಾಗಿ ಅನಾರೋಗ್ಯಕರ ಪರಿಸರ ನಿರ್ಮಾಣವಾಗಿದೆ.

ರಾಜಕಾಲುವೆ ಮೇಲೆ ನಿರ್ಮಿಸಲಾಗಿರುವ ಮೋರಿಗಳು ನಾಗರಿಕರು ಎಸೆದಿರುವ ಅನುಪಯುಕ್ತ ವಸ್ತುಗಳಿಂದ ತುಂಬಿಹೋಗಿವೆ. ಅವು ನೊಣ ಹಾಗೂ ಸೊಳ್ಳೆಗಳ ಆವಾಸವಾಗಿ ಪರಿಣಮಿಸಿವೆ. ಬಡಾವಣೆಯಲ್ಲಿ ಸೊಳ್ಳೆಕಾಟ ಹೆಚ್ಚಿದ್ದು, ಸಾಂಕ್ರಾಮಿಕ ರೋಗ ಹರಡುವ ಭಯ ನಿವಾಸಿಗಳನ್ನು ಕಾಡುತ್ತಿದೆ.

'ಕಾಲುವೆ ಉದ್ದಕ್ಕೂ ಹಾವುಗಳು ಕಂಡುಬರುವುದು ಸಾಮಾನ್ಯ. ಕಾಲುವೆಯಿಂದ ಹೊರಬರುವ ಹಾವುಗಳು ರಾತ್ರಿ ಹೊತ್ತು ರಸ್ತೆಗಳಲ್ಲಿ ಹರಿದಾಡುತ್ತವೆ. ಮನೆಗಳಿಂದ ಹೊರಬರಲು ಹೆದರಿಕೆಯಾಗುತ್ತದೆ. ಇಷ್ಟಾದರೂ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲ' ಎಂಬುದು ಬಡಾವಣೆ ನಿವಾಸಿಗಳ ಅಳಲು.

ವೆಂಕಟೇಶ್ವರ ಬಡಾವಣೆಗೆ ಪಟ್ಟಣದ ಪ್ರತಿಷ್ಠಿತ ಬಡಾವಣೆ ಎಂಬ ಹೆಗ್ಗಳಿಕೆ ಇದೆ. ಆದರೆ ಬಡಾವಣೆಯಲ್ಲಿ ಕೊಳೆತು ನಾರುತ್ತಿರುವ ಚರಂಡಿಗಳು, ರಸ್ತೆಗಳ ಪಕ್ಕದಲ್ಲಿ ಹಾಕಲಾಗಿರುವ ಕಸದ ರಾಶಿಗಳು, ಮನೆಗಳ ಪಕ್ಕದಲ್ಲಿ ಬೆಳೆದು ನಿಂತಿರುವ ಪೊದೆಗಳು ಹಾಗೂ ಹರಡಿರುವ ಅನಾರೋಗ್ಯಕರ ಪರಿಸರ ಬಡಾವಣೆ ಪ್ರತಿಷ್ಠೆಗೆ ಕುಂದು ತಂದಿದೆ.

ರಾಜಕಾಲುವೆಯಲ್ಲಿ ಹರಿಯಲಾಗದೆ ನಿಂತಿರುವ ಮಳೆ ನೀರು
ರಾಜಕಾಲುವೆಯಲ್ಲಿ ಹರಿಯಲಾಗದೆ ನಿಂತಿರುವ ಮಳೆ ನೀರು
ಕಾಲುವೆಯಲ್ಲಿ ಕೊಳಚೆ ನೀರು
ಕಾಲುವೆಯಲ್ಲಿ ಕೊಳಚೆ ನೀರು
ರಾಜಕಾಲುವೆಯಲ್ಲಿ ಬೆಳೆದುನಿಂತಿರುವ ಗಿಡಗೆಂಟೆ
ರಾಜಕಾಲುವೆಯಲ್ಲಿ ಬೆಳೆದುನಿಂತಿರುವ ಗಿಡಗೆಂಟೆ

ರಾಜಕಾಲುವೆ ಒತ್ತುವರಿ ತೆರವುಗೊಳಿಸಿ

ಪುರಸಭೆ ಅಧಿಕಾರಿಗಳು ನಾಗರಿಕರ ಹಿತದೃಷ್ಟಿಯಿಂದ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು. ಕಾಲುವೆಯಲ್ಲಿ ದಟ್ಟವಾಗಿ ಬೆಳೆದಿರುವ ಗಿಡಗೆಂಟೆ ತೆಗೆದು ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ನಿವಾಸಿಗಳನ್ನು ಕಾಲುವೆ ದುರ್ನಾತದಿಂದ ಪಾರುಮಾಡಬೇಕು. ಹಾವುಗಳ ಭೀತಿ ನಿವಾರಿಸಬೇಕು. ಶ್ರೀನಿವಾಸರೆಡ್ಡಿ ನಿವಾಸಿ ಸ್ವಚ್ಛ ಪರಿಸರ ನಿರ್ಮಿಸಿ ಬಡಾವಣೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ರಸ್ತೆ ಪಕ್ಕದಲ್ಲಿ ಹಾಗೂ ರಾಜಕಾಲುವೆ ಇಕ್ಕೆಲಗಳಲ್ಲಿ ಸುರಿಯಲಾಗಿರುವ ಕಸ ತೆರವುಗೊಳಿಸಬೇಕು. ನಿವಾಸಿಗಳನ್ನು ಸೊಳ್ಳೆ ಕಾಟದಿಂದ ಮುಕ್ತಗೊಳಿಸಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರವಹಿಸಬೇಕು. ಜಯರಾಮರೆಡ್ಡಿ ನಿವಾಸಿ ಅಭಿವೃದ್ಧಿಗೆ ಡಿಪಿಆರ್ ಆಗಿದೆ ವೆಂಕಟೇಶ್ವರ ಬಡಾವಣೆಯಲ್ಲಿ ಹಾದುಹೋಗುವ ರಾಜಕಾಲುವೆ ಅಭಿವೃದ್ಧಿಗೆ ಡಿಪಿಆರ್ ಆಗಿದೆ. ಶಾಸಕ ಜಿ.ಕೆ.ವೆಂಕಶಿವಾರೆಡ್ಡಿ ಅವರೂ ಸಹ ಅಲ್ಲಿನ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿಗೆ ನೀಡಿದರೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆಯಲಾಗುವುದು. ಉಳಿದಂತೆ ಬಡಾವಣೆ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್ ವ್ಯವಸ್ಥೆ ಮಾಡಲಾಗುವುದು ವೈ.ಎನ್.ಸತ್ಯನಾರಾಯಣ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT