ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಕನ್ನಡಿಗರ ಅಸ್ಮಿತೆ ಹಬ್ಬ

ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಆಯೋಜನೆ
Last Updated 2 ನವೆಂಬರ್ 2022, 6:52 IST
ಅಕ್ಷರ ಗಾತ್ರ

ಮಾಲೂರು: ‘ಕನ್ನಡ ರಾಜ್ಯೋತ್ಸವ ನಮ್ಮ ಅಸ್ಮಿತೆಯ ಹಬ್ಬ. ಜಾತಿ, ಮತ, ಧರ್ಮದ ಹಂಗಿಲ್ಲದ ಹಬ್ಬ. ಈ ಸುಂದರ ಸಂಭ್ರಮದ ದಿನದಂದು ನಾವೆಲ್ಲರೂ ಕನ್ನಡದ ಉಳಿವಿಗಾಗಿ ಪಣ ತೊಡಬೇಕಾಗಿದೆ’ ಎಂದು ಶಾಸಕ ಕೆ.ವೈ. ನಂಜೇಗೌಡ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಹಬ್ಬಗಳ ಆಚರಣಾ ಸಮಿತಿ ಹಾಗೂ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಕ್ಷಿಣ ಭಾರತದಲ್ಲಿ ಕನ್ನಡ ಭಾಷೆ ಮಾತನಾಡುವ ಎಲ್ಲಾ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ಈ ದಿನವನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ ಎಂದರು.

ಸ್ಥಳೀಯವಾಗಿ ಮಾಲೂರು ತಮಿಳುನಾಡಿನ ಗಡಿ ಭಾಗದಲ್ಲಿದೆ. ಆದರೂ, ತಮಿಳು ಇಲ್ಲಿನ ಜನರ ಮೇಲೆ ಪ್ರಭಾವ ಬೀರಿಲ್ಲ. ಇಲ್ಲಿನ ಸಂಘಟನೆಗಳ ಸತತ ಹೋರಾಟದ ಫಲವಾಗಿ ತಮಿಳುನಾಡಿನ ಹೊಸೂರು ಮತ್ತು ಕೃಷ್ಣಗಿರಿವರೆಗೂ ಕನ್ನಡ ಭಾಷೆಯ ಪ್ರಭಾವ ಹರಡಿದೆ ಎಂದರು.

ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ನ. 1 ಕನ್ನಡಿಗರಿಗೆ ಹೆಮ್ಮೆಯ ದಿನವಾಗಿದೆ. ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಪಟ್ಟಣದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜಕೀಯ ಬೆರೆಸಿ ರಾಜಕೀಯ ಪಕ್ಷದ ಮುಖಂಡರಿಗೆ ಒಂದು ದಿನದಂತೆ ಕಾರ್ಯಕ್ರಮ ರೂಪಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಹಬ್ಬವನ್ನು ಜಾತಿ, ಮತ, ಪಕ್ಷಭೇದ ಮರೆತು ಒಟ್ಟಾಗಿ ಆಚರಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷದ ಜನಪ್ರತಿನಿಧಿಗಳನ್ನು ಒಟ್ಟಾಗಿ ಸೇರಿಸಿ ಒಂದೇ ವೇದಿಕೆಯಲ್ಲಿ ಕನ್ನಡ ಹಬ್ಬ ಆಚರಣೆ ಮಾಡುವ ಕೆಲಸ ಆಗಬೇಕು ಎಂದರು.

ಸರ್ಕಾರಿ ಕಾರ್ಯಕ್ರಮ ಮುಗಿದ ನಂತರ ಜಿಟಿ ಜಿಟಿ ಮಳೆಯಲ್ಲಿಯೇ ಸಂಸದ ಮುನಿಸ್ವಾಮಿ ಹಾಗೂ ಶಾಸಕ ನಂಜೇಗೌಡ ಅವರು ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ತಾಯಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಆನೆಯೊಂದಿಗೆ ಇತಿಹಾಸ ಬಿಂಬಿಸುವ ವೈವಿಧ್ಯಮಯ ಜನಪದ ಕಲಾ ತಂಡಗಳು ಪಾಲ್ಗೊಂಡಿದ್ದವು. ಒಕ್ಕೂಟದ ಅಧ್ಯಕ್ಷ ಸಿ. ಲಕ್ಷ್ಮಿನಾರಾಯಣ್, ಕಸಾಪ ಅಧ್ಯಕ್ಷ ಎಂ.ವಿ. ಹನುಮಂತಯ್ಯ, ಎಂ.ವಿ. ಹನುಮಂತರೆಡ್ಡಿ, ದಿನೇಶ್ ಗೌಡ, ಅಶ್ವಥ್ ರೆಡ್ಡಿ, ಎಸ್.ಎಂ. ರಾಜು, ದಯಾನಂದ್, ಉಪ ತಹಶೀಲ್ದಾರ್ ಭಾಸ್ಕರ್, ಇಒ ಮುನಿರಾಜು, ಪುರಸಭೆ ಅಧ್ಯಕ್ಷೆ ಭವ್ಯ ಶಂಕರ್, ಸದಸ್ಯರಾದ ರಾಮಮೂರ್ತಿ, ಮುರಳೀಧರ್, ಎಂ.ವಿ. ವೇಮನ್ನ, ವೆಂಕಟೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸತೀಶ್, ಮುಖಂಡರಾದ ಹೂಡಿ ವಿಜಯಕುಮಾರ್, ಆರ್. ಪ್ರಭಾಕರ್, ಮಧುಸೂದನ್, ವಿಜಯನಾರಸಿಂಹ, ಸ್ವಾಮಿ, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT