ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯೂಡಿ ಕಚೇರಿ ಎದುರು ಬಹುಜನ ಸಂಘದ ಸದಸ್ಯರ ಧರಣಿ

ರಸ್ತೆ ಕಾಮಗಾರಿ ಗುಣಮಟ್ಟ ಕಳಪೆ: ಸದಸ್ಯರ ಆರೋಪ
Last Updated 31 ಆಗಸ್ಟ್ 2018, 16:29 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ನಡೆದಿರುವ ರಸ್ತೆ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿ ಬಹುಜನ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ನಡೆಸಿದರು.

‘ಗುತ್ತಿಗೆದಾರರು ಸರ್ಕಾರದಿಂದ ರಸ್ತೆ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನ ದುರ್ಬಳಕೆ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸಿದ್ದಾರೆ. ಅಧಿಕಾರಿಗಳು ಕಾಮಗಾರಿ ಗುಣಮಟ್ಟ ಪರಿಶೀಲಿಸದೆ ಬಿಲ್‌ ಮಂಜೂರು ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲಿ ರಸ್ತೆಗಳು ಹಾಳಾಗಿವೆ’ ಎಂದು ಧರಣಿನಿರತರು ದೂರಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರ ರಸ್ತೆ ಅಭಿವೃದ್ಧಿ ಮತ್ತು ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿವೆ. ಆದರೆ, ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ಅನುದಾನ ಸದ್ಬಳಕೆ ಮಾಡದೆ ಅಕ್ರಮ ಎಸಗುತ್ತಿದ್ದಾರೆ. ಅಧಿಕಾರಿಗಳಿಗೆ ರಸ್ತೆ ಕಾಮಗಾರಿಯು ಹಣ ಮಾಡುವ ದಂಧೆಯಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್‌ ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕವಾದರೂ ಗ್ರಾಮೀಣ ಭಾಗದಲ್ಲಿ ಜನರ ಓಡಾಟಕ್ಕೆ ರಸ್ತೆ ಸೌಕರ್ಯವಿಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ, ಡಾಂಬರು, ರಸ್ತೆ ವಿಸ್ತರಣೆ ಮತ್ತು ಸಿ.ಸಿ ರಸ್ತೆ ಕಾಮಗಾರಿ ಸೋಗಿನಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ಒಂದೇ ಕಾಮಗಾರಿಗೆ ನಾಲ್ಕೈದು ಬಾರಿ ಬಿಲ್‌ ನೀಡಲಾಗುತ್ತಿದೆ’ ಎಂದು ಆರೋಪಿಸಿದರು.

ತುಟಿ ಬಿಚ್ಚುತ್ತಿಲ್ಲ: ‘ಲೋಕೋಪಯೋಗಿ ಇಲಾಖೆಯಲ್ಲಿ ಕಮಿಷನ್‌ ದಂಧೆ ವ್ಯಾಪಕವಾಗಿದೆ. ಕಾಮಗಾರಿ ನಡೆಯದಿದ್ದರೂ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲಾಗಿದೆ. ಗುತ್ತಿಗೆದಾರರ ಕೈಗೊಂಬೆಗಳಾಗಿರುವ ಅಧಿಕಾರಿಗಳು ಕಚೇರಿಯಲ್ಲಿ ಕೂತು ಬಿಲ್‌ ಮಂಜೂರಾತಿ ನೀಡುತ್ತಿದ್ದಾರೆ. ಜನಪ್ರತಿನಿಧಿಗಳು ಈ ಅಕ್ರಮಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಗುತ್ತಿಗೆದಾರರಿಗೆ ಬಿಲ್‌ ತಡೆ ಹಿಡಿಯಬೇಕು. ರಸ್ತೆ ಕಾಮಗಾರಿ ಗುಣಮಟ್ಟ ಕಳಪೆಯಾಗಿರುವ ಸಂಬಂಧ ತನಿಖೆ ನಡೆಸಬೇಕು. ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ, ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಮಹಾಲಕ್ಷ್ಮಿ, ರಾಮು, ಶಿವಮ್ಮ, ರಾಘವೇಂದ್ರ, ಅನಿಲ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT