ಶುಕ್ರವಾರ, ಮೇ 14, 2021
25 °C
ಶ್ರೀರಾಮ ನಾಮ ಸ್ಮರಣೆ

ಜಿಲ್ಲೆಯಲ್ಲಿ ಕಳೆಗಟ್ಟಿದ ರಾಮನವಮಿ ಆಚರಣೆ: ಪಾನಕ ಕೋಸಂಬರಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಆತಂಕದ ನಡುವೆಯೂ ಜಿಲ್ಲೆಯಾದ್ಯಂತ ಬುಧವಾರ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಜಿಲ್ಲೆಗೂ ಶ್ರೀರಾಮ ನವಮಿಗೂ ವಿಶೇಷ ನಂಟು. ಇಲ್ಲಿ ಶ್ರೀರಾಮನ ಭಕ್ತ ಹನುಮನಿಲ್ಲದ ಊರು, ಕೇರಿಯೇ ಇಲ್ಲ. ಹಬ್ಬದ ಪ್ರಯುಕ್ತ ಶ್ರೀರಾಮ ದೇವಸ್ಥಾನ ಮತ್ತು ಆಂಜನೇಯ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ನಡೆಯಿತು. ಭಕ್ತರು ಶ್ರೀರಾಮ ಸ್ಮರಣೆಯಲ್ಲಿ ತೊಡಗಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ದೊಡ್ಡಪೇಟೆಯ ಶ್ರೀರಾಮ ದೇವಸ್ಥಾನ, ವೆಂಕಟರಮಣಸ್ವಾಮಿ, ಬ್ರಾಹ್ಮಣರ ಬೀದಿಯ ಕೋದಂಡರಾಮ, ದೊಡ್ಡ ಆಂಜನೇಯಸ್ವಾಮಿ, ಕುರುಬರಪೇಟೆಯ ಪಂಚಮುಖಿ ಗಣಪತಿ, ನಗರದೇವತೆ ಕೋಲಾರಮ್ಮ ದೇವಾಲಯ, ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಶ್ರೀರಾಮದೇವರ ಗುಡಿಯಲ್ಲಿ ಅಭಿಷೇಕ ಮತ್ತು ವಿಶೇಷ ಪೂಜೆ ನಡೆಯಿತು. ಇಡೀ ದೇವಾಲಯವನ್ನು ಹೂಗಳಿಂದ ಸಿಂಗರಿಸಲಾಗಿತ್ತು. ಭಕ್ತರು ದೇವಾಲಯಗಳಲ್ಲಿ ದೇವರ ದರ್ಶನಕ್ಕಾಗಿ ಮುಂಜಾನೆಯಿಂದಲೇ ಸಾಲುಗಟ್ಟಿ ನಿಂತಿದ್ದರು.

ದೇವಸ್ಥಾನಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಮಾಸ್ಕ್‌ ಧರಿಸಿ ಬಂದಿದ್ದ ಭಕ್ತರು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು. ದೇವಸ್ಥಾನಗಳ ಪ್ರವೇಶ ಭಾಗದಲ್ಲೇ ಭಕ್ತರಿಗೆ ಸ್ಯಾನಿಟೈಸರ್‌ನ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯಗಳಲ್ಲಿ ಅಭಿಷೇಕ, ಮಹಾ ಸುದರ್ಶನ ಹೋಮ, ರಾಮತಾರಕ ಹೋಮ, ರಾಮಾಯಣ ಪಾರಾಯಣ, ವೇದ ಪಾರಾಯಣ, ಮಹಾ ಮಂಗಳಾರತಿ ನೆರವೇರಿತು. ಹಲವು ಭಕ್ತರು ಉಪವಾಸ ವ್ರತ ಆಚರಿಸಿ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಪಾನಕ, ಕೋಸಂಬರಿ, ಮಜ್ಜಿಗೆ ಸೇವಿಸಿದರು.

ಪಾನಕ ವಿತರಣೆ: ವಿವಿಧ ಸಂಘಟನೆಗಳ ಸದಸ್ಯರು ಹಾಗೂ ವ್ಯಾಪಾರಿಗಳು ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಪೆಂಡಾಲ್‌ ಹಾಕಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ಬೇಸಿಗೆಯ ಸುಡು ಬಿಸಿಲಿನಲ್ಲಿ ಬಸವಳಿದಿದ್ದ ಜನ ಮಜ್ಜಿಗೆ, ಪಾನಕ ಸೇವಿಸಿ ಸಂತೃಪ್ತರಾದರು.

ಶ್ರೀರಾಮ ಭಜನೆ, ಹನುಮಾನ್ ಕೀರ್ತನೆ, ಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ದೇವಾಲಯಗಳ ಬಳಿ ಅಹಿತಕರ ಘಟನೆ ಸಂಭವಿಸದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು