ಮಂಗಳವಾರ, ನವೆಂಬರ್ 24, 2020
21 °C

ರಾಮಾಯಣ ಗ್ರಂಥವು ಸಮಾಜಕ್ಕೆ ದಾರಿದೀಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದ ಮೌಲ್ಯಗಳನ್ನು ಭದ್ರವಾಗಿ ಕಾಪಾಡಿಕೊಂಡು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸ ಆಗಬೇಕು’ ಎಂದು ನಗರದ ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಗಂಗಾಧರರಾವ್ ಹೇಳಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಹಾಗೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಜನ್ಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಲ್ಲಭಭಾಯಿ ಪಟೇಲ್‌ ಅವರು ಅಪ್ರತಿಮ ದೇಶಪ್ರೇಮಿ ಮತ್ತು ಹೋರಾಟಗಾರ’ ಎಂದರು.

‘ರಾಮಾಯಣವು ಕೇವಲ ಹಿಂದೂಗಳ ಧರ್ಮ ಗ್ರಂಥವಲ್ಲ. ಮಾನವೀಯ ಸಂಬಂಧಗಳ ಮೌಲ್ಯ ಪ್ರತಿಪಾದಿಸುವ ಮಹಾನ್‌ ಗ್ರಂಥವಾಗಿದೆ. ವಿಶ್ವ ಮನ್ನಣೆ ಪಡೆದಿರುವ ರಾಮಾಯಣವು ಸಮಾಜಕ್ಕೆ ದಾರಿದೀಪ. ಈ ಗ್ರಂಥದಲ್ಲಿನ ಮೌಲ್ಯಗಳನ್ನು ಸಮಾಜದಲ್ಲಿ ಪುನರ್ ಪ್ರತಿಷ್ಠಾಪಿಸಬೇಕು’ ಎಂದು ತಿಳಿಸಿದರು.

ಭಾರತ ಏಕೀಕರಣ ಹಾಗೂ ವಾಲ್ಮೀಕಿಯ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದ ಉಪನ್ಯಾಸಕ ಅರಿವು ಶಿವಪ್ಪ, ‘ರಾಮಾಯಣ ರಚನೆಯಾಗಿ ಶತಮಾನಗಳೇ ಕಳೆದರೂ ಅದು ಸಾರ್ವಕಾಲಿಕ. ರಾಮಾಯಣವು ಸತ್ಯ ಮತ್ತು ಧರ್ಮದ ನಡುವೆ ಇರುವ ವ್ಯತ್ಯಾಸ ಹಾಗೂ ಪರಿಣಾಮಗಳನ್ನು ಸಾರಿ ಹೇಳುತ್ತದೆ’ ಎಂದು ವಿವರಿಸಿದರು.

‘ಹೈದರಾಬಾದ್‌ ಸಂಸ್ಥಾನವನ್ನು ಭಾರತದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸಿದ ವಲ್ಲಭಭಾಯಿ ಪಟೇಲ್‌ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲಾಗುತ್ತದೆ. ಅವರ ಶ್ರಮದಿಂದ ಏಕೀಕೃತ ಭಾರತ ನಿರ್ಮಾಣವಾಯಿತು. 1947ರ ಇಂಡಿಯನ್ ಇಂಡಿಪೆಂಡೆನ್ಸ್ ಕಾಯಿದೆ ಪ್ರಕಾರ ಬ್ರಿಟೀಷರ ಆಳ್ವಿಕೆಯಿಂದ 565 ಸ್ವಯಂ ಆಡಳಿತ ಸಂಸ್ಥಾನಗಳನ್ನು ಬಿಡುಗಡೆ ಮಾಡಿಸಿದರು’ ಎಂದು ಮಾಹಿತಿ ನೀಡಿದರು.

ಸ್ಫೂರ್ತಿಯ ಸೆಲೆ: ‘ಆಧುನಿಕ ಅಖಿಲ ಭಾರತ ಸೇವೆ ವ್ಯವಸ್ಥೆ ಸ್ಥಾಪಿಸಿದ ವಲಭಭಾಯಿ ಪಟೇಲ್‌ ಅವರನ್ನು ಭಾರತದ ನಾಗರಿಕ ಸೇವಕರ ಪೋಷಕ ಸಂತ ಎಂದು ಕರೆಯಲಾಗುತ್ತದೆ. ಜರ್ಮನಿಯ ಬಿಸ್ಮಾರ್ಕ್‌ನಂತೆ ಆಧುನಿಕ ಭಾರತದ ಏಕೀಕರಣದ ಮಹಾನ್ ಶಿಲ್ಪಿಯಾಗಿರುವ ಅವರು ಯುವ ಜನತೆಗೆ ಸ್ಫೂರ್ತಿಯ ಸೆಲೆ’ ಎಂದು ಎನ್‍ಎಸ್‍ಎಸ್ ಅಧಿಕಾರಿ ಜಿ.ಎಂ.ಪ್ರಕಾಶ್ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.