ಮಂಗಳವಾರ, ಆಗಸ್ಟ್ 16, 2022
22 °C
ಒಳ್ಳೆ ಮಳೆಯಾದ ಪರಿಣಾಮ

ಶ್ರೀನಿವಾಸಪುರ: ಪುನರ್ಜನ್ಮ ಪಡೆದ ಮೂಲಿಕಾ ಸಸ್ಯ ‘ತುಂಬೆ’

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನ ಹೊಗಳಗೆರೆ ಗ್ರಾಮದ ಸಮೀಪ ಹೊಲವೊಂದರಲ್ಲಿ ಮೂಲಿಕಾ ಸಸ್ಯ ಎನಿಸಿರುವ ತುಂಬೆ ಗಿಡಗಳು ದಟ್ಟವಾಗಿ ಬೆಳೆದಿವೆ. ಮಳೆ ಕೊರತೆಯಿಂದ ತುಂಬೆ ಅಸ್ತಿತ್ವ ಕಳೆದುಕೊಂಡಿದೆ ಎಂದು ಭಾವಿಸಿದ್ದ ಜನರಿಗೆ ಅದರ ಪುನರ್ಜನ್ಮದಿಂದ ಸಂತೋಷವಾಗಿದೆ.

ತುಂಬೆ ಗ್ರಾಮೀಣ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಶಿವನ ಪೂಜೆಗೆ ತುಂಬೆ ಹೂ ಶ್ರೇಷ್ಠ ಎಂಬ ಭಾವನೆ ಇದೆ. ಹಾಗಾಗಿ ಕೆಲವರು ಬೆಳಿಗ್ಗೆ ತುಂಬೆ ಹೂವನ್ನು ಬಿಡಿಸಿ ತಂದು ಪೂಜೆಗೆ ಬಳಸುತ್ತಿದ್ದರು. ಇನ್ನು ಕೆಲವರು ಹೂವನ್ನು ಬಿಡಿಸಿ ಶಿವನ ದೇವಾಲಯಗಳಿಗೆ ಮಾರುತ್ತಿದ್ದರು. ಪಾದದ ಆಕಾರದಲ್ಲಿರುವ ಶ್ವೇತ ವರ್ಣದ ಹೂವು ಪವಿತ್ರವಾದುದು ಎಂದು ಹೇಳುವ ಜನರಿಗೆ ಕೊರತೆಯಿಲ್ಲ.

ಜಾನಪದ ವೈದ್ಯದಲ್ಲಿ ತುಂಬೆಗೆ ತನ್ನದೇ ಆದ ಸ್ಥಾನವಿದೆ. ಗ್ರಾಮೀಣ ಪ್ರದೇಶದಲ್ಲಿ ಹಿಂದೆ ಗದಗಲಮ್ಮ ಎಂಬ ಬೇನೆ ಸಾಮಾನ್ಯವಾಗಿ ಕಾಡುತ್ತಿತ್ತು. ಆಗ ತುಂಬೆ ಸೊಪ್ಪನ್ನು ತಂದು ಅರೆದು ರಸ ತೆಗೆದು, ಗಡ್ಡದ ಕೆಳಗೆ ಬಾವು ಬಂದಿರುವ ಭಾಗದಲ್ಲಿ ಹಚ್ಚುತ್ತಿದ್ದರು. ಅದರ ಮೇಲೆ ಕುಂಕುಮದ ಚುಕ್ಕಿಗಳನ್ನು ಇಡುತ್ತಿದ್ದರು. ಜಾನುವಾರು ವೈದ್ಯದಲ್ಲೂ ತುಂಬೆ ಗಿಡಕ್ಕೆ ತನ್ನದೇ ಆದ ಮಹತ್ವ ಇದೆ.

ತುಂಬೆ ಗಿಡದಲ್ಲಿ ಎರಡು ವಿಧಗಳಿವೆ. ಕಿರುದುಂಬೆ ಮತ್ತು ಹೆದ್ದುಂಬೆ ಎಂದು ಕರೆಯಲ್ಪಡುವ ಈ ಗಿಡಗಳನ್ನು ಪ್ರತ್ಯೇಕವಾಗಿ ಬಳಸಿಕೊಳ್ಳುತ್ತಿದ್ದರು. ನಾಟಿ ವೈದ್ಯದಲ್ಲಿ ಕಿರು ತುಂಬೆಯನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಈ ಗಿಡದಿಂದಲೇ ಹೂವನ್ನು ಬಿಡಿಸಲಾಗುತ್ತಿತ್ತು. ಹೆದ್ದುಂಬೆ ಗಿಡಗಳು ಎತ್ತರವಾಗಿ ಬೆಳೆಯುವುದರಿಂದ, ಅವುಗಳನ್ನು ಕಿತ್ತು ತಂದು ಕಣ ಸಾರಿಸಲು ಪೊರಕೆಯಂತೆ ಬಳಸುತ್ತಿದ್ದರು.

ತುಂಬೆ ಗ್ರಾಮೀಣ ಪ್ರದೇಶದಲ್ಲಿ ಎಲ್ಲೆಲ್ಲೂ ಕಂಡುಬರುತ್ತಿದ್ದ ಸಾಮಾನ್ಯ ಗಿಡವಾಗಿತ್ತು. ಕೆಲವು ಸಲ ಹೊಲಗಳಲ್ಲಿ ಕಳೆಯಂತೆ ಬೆಳೆದು ರೈತರಿಗೆ ಸಮಸ್ಯೆ ಉಂಟುಮಾಡುತ್ತಿತ್ತು. ಆದರೆ ಮಳೆ ಸುರಿಯುವ ಪ್ರಮಾಣ ಕುಸಿದಂತೆ ತುಂಬೆ ಗಿಡ ಕಣ್ಮರೆಯಾಯಿತು. ಅದರೊಂದಿಗೆ ಅದರ ಉಪಯೋಗವೂ ನಿಂತುಹೋಯಿತು.

ಆದರೆ ಈ ಬಾರಿ ಆರಂಭದಿಂದಲೂ ಉತ್ತಮ ಮಳೆಯಾಗಿದೆ. ಅಪರೂಪಕ್ಕೆ ಯಾವುದೇ ಬೆಳೆ ಒಣಗಿದ್ದಿಲ್ಲ. ಇಂಥ ವಾತಾವರಣ ಕಂಡು ಕೆಲವು ದಶಕಗಳೇ ಕಳೆದಿದ್ದವು. ಮಳೆಯೊಂದಿಗೆ ತುಂಬೆ ಗಿಡ ಮರುಹುಟ್ಟು ಪಡೆದಿದೆ. ಗ್ರಾಮೀಣ ಪ್ರದೇಶದ ಹಿರಿಯ ಕೃಷಿಕರು ಅದನ್ನು ಹಿಂದಿನಂತೆಯೇ ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಕಣ ಇಲ್ಲವಾದರೂ, ಔಷಧೀಯ ಸಸ್ಯವಾಗಿ ಬಳಕೆಯಾಗುತ್ತಿದೆ.

‘ಭೂಮಿ ತಾಯಿ ಬಿತ್ತನೆ ಬೀಜವನ್ನು ತನ್ನ ಮಡಿಲಲ್ಲಿ ಕಾಪಿಟ್ಟಿರುತ್ತಾಳೆ. ಮಳೆಯಾದರೆ ಅದು ಮೊಳಕೆಯೊಡೆದು ಬೆಳೆಯುತ್ತದೆ. ಈ ವರ್ಷ ಒಳ್ಳೆ ಮಳೆಯಾದ ಪರಿಣಾಮವಾಗಿ ಕಣ್ಮರೆಯಾಗಿದ್ದ ಎಷ್ಟೋ ಗಿಡಗಂಟಿಗಳು ಕಾಣಿಸಿಕೊಂಡಿವೆ’ ಎಂದು ಹಿರಿಯ ರೈತ ಮಹಿಳೆ ವೆಂಕಟಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು