ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ: ಸ್ವಾಗತಾರ್ಹ

ಪತ್ರಿಕಾಗೋಷ್ಠಿಯಲ್ಲಿ ಸಮ್ಮಿಲನ–ಸಂಗಮ ಸಂಸ್ಥೆ ಜಿಲ್ಲಾ ಸಂಯೋಜಕಿ ಅನೂಷಾ ಸಂತಸ
Last Updated 14 ಜುಲೈ 2021, 16:45 IST
ಅಕ್ಷರ ಗಾತ್ರ

ಕೋಲಾರ: ‘ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಿ ಉದ್ಯೋಗದಲ್ಲಿ ಶೇ 1ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ’ ಎಂದು ಸಮ್ಮಿಲನ ಹಾಗೂ ಸಂಗಮ ಸಂಸ್ಥೆ ಜಿಲ್ಲಾ ಸಂಯೋಜಕಿ ಎಸ್‌.ಅನೂಷಾ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲೈಂಗಿಕ ಅಲ್ಪಸಂಖ್ಯಾತರನ್ನು ಸಮಾಜ ಕಡೆಗಣಿಸಿದೆ. ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲೈಂಗಿಕ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ. ಇದನ್ನು ಮನಗಂಡ ಸರ್ಕಾರ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಘೋಷಿಸಿದೆ’ ಎಂದರು.

‘ಸರ್ಕಾರ ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 1ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿ ಹೈಕೋರ್ಟ್ಗೆ ಮಾಹಿತಿ ನೀಡಿದೆ. ಅದೇ ರೀತಿ ಪ್ರತಿ ಕ್ಷೇತ್ರದಲ್ಲೂ ಸೂಕ್ತ ಸ್ಥಾನಮಾನ ನೀಡಬೇಕು. ಆಗ ಮಾತ್ರ ಲೈಂಗಿಕ ಅಲ್ಪಸಂಖ್ಯಾತರ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಹೇಳಿದರು.

‘ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ. ದಿಟ್ಟ ಹೋರಾಟದಿಂದ ಈಗ ಮೀಸಲಾತಿ ದೊರಕಿದೆ. ಸಂಗಮ ಸ್ವಯಂ ಸೇವಾ ಸಂಸ್ಥೆ ವ್ಯವಸ್ಥಾಪಕಿ ನಿಶಾ ಗೂಳೂರು ಅವರ ಪರಿಶ್ರಮದಿಂದಾಗಿ ಇದು ಸಾಧ್ಯವಾಯಿತು’ ಎಂದು ತಿಳಿಸಿದರು.

‘ಲೈಂಗಿಕ ಅಲ್ಪಸಂಖ್ಯಾತರು ಸಹ ಮನುಷ್ಯರು. ಸಾರ್ವಜನಿಕರು ಅವರನ್ನು ಸಮುದಾಯದ ಭಾಗವಾಗಿ ನೋಡಬೇಕು. ಅವರ ಬದುಕು ಕಷ್ಟದಲ್ಲಿದೆ. ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ಹಕ್ಕು ಉಲ್ಲಂಘಿಸುತ್ತಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

ಹಕ್ಕು ಸಿಕ್ಕಿದೆ: ‘ಅಂತರರಾಷ್ಟ್ರೀಯ ಮಟ್ಟದಲ್ಲೂ ತೃತೀಯ ಲಿಂಗಿಗಳ ಹೋರಾಟ ನಡೆಯುತ್ತಿದೆ. ಅಂಬೇಡ್ಕರ್ ನೀಡಿದ ಸಂವಿಧಾನದ ಅಸ್ತ್ರದಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಎಲ್ಲರಂತೆ ಸಮನಾಗಿ ಬದುಕುವ ಹಕ್ಕು ಸಿಕ್ಕಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಸ್ವಾವಲಂಬಿ ಜೀವನ ನಡೆಸಲು ಉದ್ಯೋಗ ಕಲ್ಪಿಸಬೇಕು ಮತ್ತು ಕೌಶಲ ತರಬೇತಿ ನೀಡಬೇಕು’ ಎಂದು ಸಮ್ಮಿಲನ ಹಾಗೂ ಸಂಗಮ ಸಂಸ್ಥೆ ಖಜಾಂಚಿ ರಾಧಿಕಾ ಮನವಿ ಮಾಡಿದರು.

‘ಲಿಂಗತ್ವ ಎನ್ನುವುದು ವರ್ತನೆ, ಮನೋಭಾವ ಮತ್ತು ಗುಣದ ಮೇಲೆ ಆಧಾರವಾಗಿದೆ. ತಾನು ಹೆಣ್ಣೆಂದು ಗುರುತಿಸಿಕೊಳ್ಳಲು ಅವಕಾಶವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಸಂವಿಧಾನದಲ್ಲಿ ಪ್ರಜೆಗಳು ಎಂಬ ಪರಿಭಾಷೆಗೆ ನಾವೂ ಒಳಪಡುತ್ತೇವೆ. ನಮಗೂ ಸಮಾನ ಹಕ್ಕು, ಅವಕಾಶವಿದ್ದರೂ ಕನಿಷ್ಠ ಗೌರವ ನೀಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಮ್ಮಿಲನ ಹಾಗೂ ಸಂಗಮ ಸಂಸ್ಥೆ ಪದಾಧಿಕಾರಿಗಳಾದ ಮುನಿಕೃಷ್ಣ, ನವ್ಯ, ಕೃಷ್ಣಮೂರ್ತಿ, ಶಶಿಕುಮಾರ್, ಸಾಗರ್, ಲಾವಣ್ಯ, ಸುರೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT