ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಶಾಸಕಿ ತರಾಟೆ

ನನೆಗುದ್ದಿಗೆ ಬಿದ್ದ ಕೆಜಿಎಫ್‌ನ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ
Last Updated 9 ಮೇ 2019, 13:52 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಕೆಜಿಎಫ್‌ ನಗರದ ಅಶೋಕನಗರ ರಸ್ತೆ ವಿಸ್ತರಣೆ ಕಾಮಗಾರಿ 8 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸಂಬಂಧ ಶಾಸಕಿ ಎಂ.ರೂಪಕಲಾ ಇಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ರಸ್ತೆ ವಿಸ್ತರಣೆ ಕಾಮಗಾರಿ ಸಂಬಂಧ ಇಲ್ಲಿ ನಡೆದ ಸಭೆಯಲ್ಲಿ ರೂಪಕಲಾ, ‘ರಸ್ತೆ ವಿಸ್ತರಣೆಗೆ ಸಂಬಂಧಿಸಿದ ದಾಖಲೆಪತ್ರ ಸಲ್ಲಿಸದೆ ನಿರ್ಲಕ್ಷ್ಯ ತೋರಿದ್ದೀರಿ. ರಸ್ತೆ ಸಮಸ್ಯೆ 8 ವರ್ಷಗಳಿಂದ ಮುಂದುವರಿದಿದೆ. ದಾಖಲೆಪತ್ರ ಕೊಡಲು ನಿಮಗೇನು ಸಮಸ್ಯೆ?’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇಲಾಖೆ ಎಂಜಿನಿಯರ್‌ಗಳು ಕಾಮಗಾರಿ ಸಂಬಂಧ ವಿವರಣೆ ನೀಡಲು ಮುಂದಾದಾಗ ಶಾಸಕಿ, ‘ಮೊದಲು ದಾಖಲೆಪತ್ರ ತೋರಿಸಿ, ನಂತರ ನೀವು ಹೇಳಿದ ಕಥೆ ಕೇಳುತ್ತೇನೆ. ಈ ಹಿಂದೆ ಜಿಲ್ಲಾಧಿಕಾರಿ ಸಭೆ ನಡೆಸಿದಾಗಲೂ ದಾಖಲೆಪತ್ರ ನೀಡದೆ ತಡಬಡಾಯಿಸಿದ್ದೀರಿ. ಈಗಲೂ ಅದೇ ರೀತಿ ಮಾಡುತ್ತಿದ್ದೀರಿ’ ಎಂದು ಸಿಡಿಮಿಡಿಗೊಂಡರು.

‘ಬಾಕಿ ಇರುವ ಒತ್ತುವರಿ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಸ್ಕೂಲ್ ಆಫ್ ಮೈನ್ಸ್‌ನಿಂದ ಅಶೋಕ ನಗರದ ಕೊನೆಯವರೆಗೆ 2 ಕಿ.ಮೀ ರಸ್ತೆಯನ್ನು ರಾಜ್ಯ ಹೆದ್ದಾರಿ ಎಂದು ದಾಖಲೆಪತ್ರದಲ್ಲಿ ತಿಳಿಸಲಾಗಿದೆ. ಆದರೆ, ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಒತ್ತುವರಿ ತೆರವುಗೊಳಿಸದಿದ್ದರೆ ಹೇಗೆ?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಕಲಿ ದಾಖಲೆಪತ್ರ ಸೃಷ್ಟಿ: ‘ಬೆರಳೆಣಿಕೆ ಮಂದಿ ನಕಲಿ ದಾಖಲೆಪತ್ರ ಸೃಷ್ಟಿಸಿಕೊಂಡು ಒತ್ತುವರಿ ತೆರವು ಮಾಡದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಒತ್ತುವರಿಗೆ ಸಂಬಂಧಿಸಿದ ಸತ್ಯಾಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರೆ ಮತ್ತು ಆಗಾಗ್ಗೆ ಸರ್ಕಾರಿ ವಕೀಲರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರೆ ಸಮಸ್ಯೆ ಇಷ್ಟು ಗಂಭೀರವಾಗುತ್ತಿರಲಿಲ್ಲ. ಇನ್ನಾದರೂ ತುರ್ತಾಗಿ ಕೆಲಸ ಮಾಡಿ’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಬದರೀನಾಥ್‌ ಅವರಿಗೆ ಸೂಚಿಸಿದರು.

‘ಸಾರ್ವಜನಿಕರು ಪ್ರಶ್ನೆ ಮಾಡಿರುವಂತೆ ಒತ್ತುವರಿಯಾಗಿರುವ ಜಾಗ ಯಾರ ಸ್ವತ್ತು ಎಂಬ ಬಗ್ಗೆ ನ್ಯಾಯಾಲಯಕ್ಕೆ ದಾಖಲೆಪತ್ರ ಸಲ್ಲಿಸಿದರೆ ಗೊಂದಲ ಬಗೆಹರಿಯುತ್ತದೆ. ಇಷ್ಟೆಲ್ಲಾ ಅವಕಾಶವಿದ್ದರೂ ವಿನಾಕಾರಣ ಜನರಿಗೆ ತೊಂದರೆ ಮಾಡುತ್ತಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.

ಲೋಪವಾಗಿಲ್ಲ: ‘ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಹನುಮಪ್ಪ ಅವರೇ 8 ವರ್ಷದಿಂದ ಕೆಜಿಎಫ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ ಸಮಸ್ಯೆ ಬೆಳೆಯಲು ಬಿಟ್ಟಿದ್ದಾರೆ. ಅವರ ಬೇಜವಾಬ್ದಾರಿತನವೇ ಸಮಸ್ಯೆಗೆ ಮೂಲ ಕಾರಣ’ ಎಂದು ಕೆಜಿಎಫ್‌ನ ಕೆಲ ಮುಖಂಡರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹನುಮಪ್ಪ, ‘ಸರಿಯಾದ ದಾಖಲೆಪತ್ರ ಒದಗಿಸಿದರೆ ಅರ್ಧ ತಾಸಿನಲ್ಲಿ ಒತ್ತುವರಿ ತೆರವು ಮಾಡಿಸುತ್ತೇವೆ. ಸರ್ಕಾರಿ ವಕೀಲರು ನಿರ್ಲಕ್ಷ್ಯ ತೋರಿದರೆ ಹೊರತು ನಮ್ಮ ಕಡೆಯಿಂದ ಲೋಪವಾಗಿಲ್ಲ’ ಎಂದು ಸಮಜಾಯಿಷಿ ನೀಡಿದರು.

ಆಗ ಮಧ್ಯಪ್ರವೇಶಿಸಿದ ಶಾಸಕಿ, ‘ಹಿಂದೆ ಆಗಿರುವುದನ್ನು ಬಿಟ್ಟು ಈಗ ಆಗಬೇಕಿರುವ ಕೆಲಸವನ್ನು ತ್ವರಿತವಾಗಿ ಮಾಡಿ’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT