ನಗರಸಭೆಯ 35 ಸದಸ್ಯರ ಪೈಕಿ 14 ಸದಸ್ಯರನ್ನು ಹೊಂದಿದ ಕಾಂಗ್ರೆಸ್ ತನ್ನ ಪಕ್ಷದ ಸದಸ್ಯರ ಜೊತೆಗೆ 15 ಪಕ್ಷೇತರ ಸದಸ್ಯರನ್ನು ಕೂಡ ಸೆಳೆದುಕೊಂಡಿದ್ದರಿಂದ, ಚುನಾವಣೆಯಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ಚುನಾಯಿತರಾದ ಇಬ್ಬರೂ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಚುನಾವಣೆಯಲ್ಲಿ ಯಾರ ಹೆಸರನ್ನು ಶಾಸಕಿ ರೂಪಕಲಾ ಸೂಚಿಸುತ್ತಾರೆ ಎಂಬುದು ಗೋಪ್ಯವಾಗಿತ್ತು. ಮುಂಜಾನೆ ನಗರಸಭೆಯಲ್ಲಿ ನಾಮಪತ್ರ ಹಾಕುವ ಸಂದರ್ಭದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಪ್ರಕಟಿಸಲಾಯಿತು. ಬೇರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ತೀವ್ರ ಪೈಪೋಟಿ ಇದ್ದ ಅಧ್ಯಕ್ಷ ಸ್ಥಾನಕ್ಕೆ ಶಾಂತಿ ಮತ್ತು ಶಾಲಿನಿ ಅವರ ಹೆಸರು ಪ್ರಧಾನವಾಗಿ ಕೇಳಿ ಬಂದಿತ್ತು. ಆದರೆ ಕೊನೆ ಕ್ಷಣದಲ್ಲಿ ಇಬ್ಬರ ಹೆಸರನ್ನು ಬದಿಗೊತ್ತಿ ಇಂದಿರಾಗಾಂಧಿ ಅವರ ಹೆಸರನ್ನು ಶಾಸಕಿ ಆಯ್ಕೆ ಮಾಡಿದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿತ್ತು.