ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಬಂಡೆ ಜಾಗ: ಅಕ್ರಮ ಹಂಚಿಕೆ

ಕುಟುಂಬಗಳಿಗೆ ಅನ್ಯಾಯ: ಭೂವಿಜ್ಞಾನಿ ಷಣ್ಮುಗ ವಿರುದ್ಧ ಆರೋಪ
Last Updated 14 ಜನವರಿ 2021, 16:09 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ಭೂವಿಜ್ಞಾನಿ ಷಣ್ಮುಗ ಅವರು ಹಾಲಿ ಪರವಾನಗಿದಾರರ ಒಡೆತನದಲ್ಲಿದ್ದ ಕಲ್ಲು ಬಂಡೆ ಜಾಗಗಳನ್ನು ಬ್ಲಾಕ್‌ಗಳಾಗಿ ವಿಂಗಡಿಸಿ ಅಕ್ರಮವಾಗಿ ಪ್ರಭಾವಿ ರಾಜಕಾರಣಿಗಳು, ಬಂಡವಾಳಶಾಹಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಂಬಂಧಿಕರಿಗೆ ಗುತ್ತಿಗೆಗೆ ಕೊಟ್ಟಿದ್ದಾರೆ’ ಎಂದು ರಾಜ್ಯ ಕ್ವಾರಿ ಗುತ್ತಿಗೆದಾರರ ಮತ್ತು ವೃತ್ತಿಪರ ಕಾರ್ಮಿಕರ ಮಹಾಸಂಘದ ಅಧ್ಯಕ್ಷ ಆಂಜನಪ್ಪ ಆರೋಪಿಸಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೋಲಾರ ತಾಲ್ಲೂಕಿನ ಬೆಳ್ಳೂರು, ದಿನ್ನೆಹೊಸಹಳ್ಳಿ, ದಾನವಹಳ್ಳಿ, ಬೈರಸಂದ್ರ, ಚಾಕರಸನಹಳ್ಳಿ, ವಲ್ಲಬ್ಬಿ, ಚೌಡದೇನಹಳ್ಳಿಯಲ್ಲಿನ ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ 400 ಕುಟುಂಬಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 1994ರಲ್ಲೇ ಪರವಾನಗಿ ಪಡೆದು ವೃತ್ತಿಪರವಾಗಿ ಕಲ್ಲು ಬಂಡೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿವೆ’ ಎಂದರು.

‘ಷಣ್ಮುಗ ಅವರು ಲಂಚದಾಸೆಗೆ ಕಲ್ಲು ಬಂಡೆ ಜಾಗಗಳನ್ನು ನಿಯಮಬಾಹಿರವಾಗಿ ಹಣವಂತರಿಗೆ ಹಂಚಿಕೆ ಮಾಡಿದ್ದಾರೆ. ಹಾಲಿ ಪರವಾನಗಿದಾರರ ಲೈಸನ್ಸ್‌ ನವೀಕರಣ ಮಾಡದೆ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಅನ್ಯಾಯವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘400 ಕುಟುಂಬಗಳು ಖನಿಜ ಕಾನೂನು ಅನ್ವಯ ಕಾಲಕಾಲಕ್ಕೆ ಪರವಾನಗಿ ನವೀಕರಿಸಿಕೊಂಡು ಗಣಿ ಕೆಲಸ ಮಾಡಿಕೊಂಡು ಬರುತ್ತಿದ್ದವು. ಷಣ್ಮುಗ ಅವರು ಇದೀಗ ಪರವಾನಗಿ ನವೀಕರಣಕ್ಕೆ ಎಕರೆಗೆ ₹ 20 ಲಕ್ಷ ಕೊಡುವಂತೆ ಈ ಕುಟುಂಬಗಳಿಗೆ ಬೇಡಿಕೆ ಇಟ್ಟಿದ್ದಾರೆ. ಲಂಚ ವಸೂಲಿಗೆ ಸಿಬ್ಬಂದಿಯನ್ನು ಮಧ್ಯವರ್ತಿಗಳಾಗಿ ನಿಯೋಜಿಸಿ ಹಾಲಿ ಪರವಾನಗಿದಾರರ ಕಲ್ಲು ಗಣಿ ಕೆಲಸ ತಡೆದಿದ್ದಾರೆ’ ಎಂದು ದೂರಿದರು.

ಬಂಧನದ ಬೆದರಿಕೆ: ‘ಗಣಿ ಪ್ರದೇಶವನ್ನು ವಶಕ್ಕೆ ಪಡೆದು ಸರ್ವೆ ಮಾಡಿ 9 ಬ್ಲಾಕ್‌ಗಳಾಗಿ ವಿಂಗಡಿಸಿ ಹಣವಂತರಿಗೆ ಮತ್ತು ಅಧಿಕಾರಿಗಳ ಸಂಬಂಧಿಕರಿಂದ ಅಪಾರ ಹಣ ಪಡೆದು ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಹಳೆಯ ಪರವಾನಗಿದಾರರು ಆ ಪ್ರದೇಶದಲ್ಲಿ ಗಣಿ ಕೆಲಸ ಮಾಡಿದರೆ ಪೊಲೀಸರಿಂದ ಬಂಧನ ಮಾಡಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘400 ಕುಟುಂಬಗಳು ಕೆಲಸ ಕಳೆದುಕೊಂಡು ಆದಾಯವಿಲ್ಲದೆ ಬೀದಿ ಪಾಲಾಗಿವೆ. ಜಿಲ್ಲಾಧಿಕಾರಿಯು ಈ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಹಳೆ ಗುತ್ತಿಗೆದಾರರ ಹಾಗೂ ಕೂಲಿ ಕಾರ್ಮಿಕರ ಹಿತರಕ್ಷಣೆ ಮಾಡಬೇಕು. ಭ್ರಷ್ಟ ಭೂವಿಜ್ಞಾನಿ ಷಣ್ಮುಗ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು 400 ಕುಟುಂಬಗಳ ಜತೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಕ್ವಾರಿ ಗುತ್ತಿಗೆದಾರರ ಮತ್ತು ವೃತ್ತಿಪರ ಕಾರ್ಮಿಕರ ಮಹಾಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳಾದ ದೇವರಾಜ್, ಮುನಿರಾಜ್, ನಂಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT