ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿತ್ರಿ ಬಾಯಿಫುಲೆ ಜಯಂತಿ: ಹೆಣ್ಣು ಮಕ್ಕಳ ರಕ್ಷಣೆ ಪುಸ್ತಕಕ್ಕೆ ಸೀಮಿತ

Published 6 ಜನವರಿ 2024, 14:44 IST
Last Updated 6 ಜನವರಿ 2024, 14:44 IST
ಅಕ್ಷರ ಗಾತ್ರ

ಕೆಜಿಎಫ್‌: ‘ಮಕ್ಕಳ ಭವಿಷ್ಯ ರೂಪಿಸಬೇಕಾದ ಹಿರಿಯ ಪುರುಷರೇ ಸಣ್ಣ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರವೆಸಗುವ ಪ್ರಕರಣಗಳನ್ನು ಗಮನಿಸಿದರೆ ನಮ್ಮ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು’ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ಸರ್ಕಾರಿ ನೌಕರರ ಸಂಘದಿಂದ ಶನಿವಾರ ನಡೆದ ಸಾವಿತ್ರಿ ಬಾಯಿ ಫುಲೆ ಜಯಂತಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಹೆಣ್ಣು ಸಾವಿತ್ರಿ ಬಾಯಿ ಫುಲೆಯಂತಾಗಬೇಕು ಎಂದರು.

ಹೆಣ್ಣುಮಕ್ಕಳು ಸುರಕ್ಷಿತವಾಗಿರಬೇಕು ಎಂಬುದು ಪುಸ್ತಕಕ್ಕೆ ಸೀಮಿತವಾಗಿರಬಾರದು. ಅಂತಹ ವಾತಾವರಣವನ್ನು ಸೃಷ್ಟಿ ಮಾಡಬೇಕು. ಹೆಣ್ಣು ಮಕ್ಕಳ ಶೋಷಣೆ ನಿಲ್ಲಬೇಕು. ಮುಗ್ದ ಮಕ್ಕಳನ್ನು ಕಾಪಾಡಬೇಕು. ಹೆಣ್ಣು ಮಕ್ಕಳು ಸ್ವಾತಂತ್ರ್ಯವಾಗಿ ತಮ್ಮ ನೋವು ಹಂಚಿಕೊಳ್ಳುವ ಪರಿಸರವನ್ನು ಸೃಷ್ಟಿಸಿದರೆ ಮಾತ್ರ ಒಳ್ಳೆಯ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾವಿತ್ರಿ ಬಾಯಿ ಫುಲೆ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ನಂತರ ದೇಶದಲ್ಲಿ ಶಿಕ್ಷಕಿಯರ ಸಂಖ್ಯೆ ಹೆಚ್ಚಾಯಿತು. ಅವರ ದಾರಿಯನ್ನು ಅನುಸರಿಸುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಶಿಕ್ಷಣದ ಕ್ಷೇತ್ರದ ಪಾವಿತ್ರತೆಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.

ಮಕ್ಕಳಿಗೆ ಉತ್ತಮವಾದ ಭವಿಷ್ಯ ನೀಡುವ ಜ್ಞಾನ ಸರಸ್ವತಿಯನ್ನು ಮಕ್ಕಳಿಗೆ ನೀಡಬೇಕು.ತಿಳುವಳಿಕೆ ಇಲ್ಲದ ಮಕ್ಕಳಿಗೆ ತಿಳುವಳಿಕೆ ನೀಡುವುದು ಸುಲಭವಲ್ಲ. ವಿದ್ಯೆ ಎಲ್ಲಾ ರೀತಿಯ ಯಶಸ್ಸನ್ನು ತಂದುಕೊಡುತ್ತದೆ ಎಂಬುದಕ್ಕೆ ಬಹಳಷ್ಟು ಉದಾಹರಣೆಗಳಿವೆ ಎಂದು ಶಾಸಕಿ ಹೇಳಿದರು.

ಮಕ್ಕಳಲ್ಲಿ ಜ್ಞಾನದ ಹಸಿವು ಹೆಚ್ಚಿಸಬೇಕು. ಹೆಣ್ಣು ಮಕ್ಕಳು ಶೋಷಣೆಗೆ ಒಳಗಾಗದಂತೆ ಗಂಡು ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಸಮಾನತೆ ವಿವರಿಸಬೇಕು. ಒಬ್ಬರಿಗೆ ಹಿಂಸೆ ಮಾಡುವ, ಮುಜುಗರ ಉಂಟು ಮಾಡುವ ಸನ್ನಿವೇಶ ಉಂಟು ಮಾಡದಂತೆ ಗಂಡು ಮಕ್ಕಳಿಗೆ ವಿಶೇಷವಾಗಿ ತಿಳುವಳಿಕೆ ನೀಡಬೇಕು ಎಂದು ರೂಪಕಲಾ ತಿಳಿಸಿದರು.

ಸರ್ಕಾರಿನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಶಿಕ್ಷಕರ ವಲಯದಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರ ಸಮ್ಮುಖದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾವಿತ್ರಿ ಬಾಯಿ ಫುಲೆ ಅವರ ಕಾರ್ಯಕ್ರಮ ಮಾಡಬೇಕೆಂಬ ಶಿಕ್ಷಕರ ಆಸೆ ನೆರವೇರಿದೆ ಎಂದರು.

ಕೆಜಿಎಫ್‌ ತಾಲ್ಲೂಕಿನ ತಮಿಳು ಶಿಕ್ಷಕರು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ವರ್ಗಾವಣೆಯಾದಾಗ, ಶಿಕ್ಷಕರ ವಲಯದಲ್ಲಿ ಅಸಮಾಧಾನ ಉಂಟಾಗಿತ್ತು. ಶಿಕ್ಷಕರ ಸಂಘಟನೆಯ ಕೋರಿಕೆಯಂತೆ ಶಾಸಕಿ ರೂಪಕಲಾ ವರ್ಗಾವಣೆಯನ್ನು ರದ್ದು ಮಾಡಿಸಿದರು. ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿದರೆ ಎಲ್ಲರ ಸಹಕಾರ ನಮಗೆ ಸಿಗುತ್ತದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮುನಿವೆಂಕಟರಾಮಾಚಾರಿ ಮಾತನಾಡಿ, ದೇಶದಲ್ಲಿ ಮಹಿಳೆಯರು ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಪುರಾಣದಲ್ಲಿ ಕೂಡ ಸಾಕಷ್ಟು ಮಾರ್ಗದರ್ಶನ ನೀಡುವ ಮಹಿಳಾ ಚಿತ್ರಣಗಳಿವೆ. ಇಂತಹ ಸಾಧಕರನ್ನು ನಾವು ಅನುಸರಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಹರ್ತಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ ಕುಮಾರ್‌, ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮುಖಂಡ ಅ.ಮು.ಲಕ್ಷ್ಮೀನಾರಾಯಣ, ವಿವಿಧ ಸಂಘಟನೆಗಳ ಮುಖಂಡರಾದ ಮಾಲತೇಶ್‌, ಶ್ರೀನಿವಾಸ್‌, ಶ್ರೀನಿವಾಸ ಮೂರ್ತಿ, ಕೃಷ್ಣಮೂರ್ತಿ, ಸರಸ್ವತಮ್ಮ, ಮಲ್ಲಿಕಾ, ಅಶ್ವಥ್‌, ಗಿರೀಶ್‌, ನಾಗವೇಣಿ, ಗಂಗಾಧರ್, ಕೇಶವರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT