ಶನಿವಾರ, ಜೂಲೈ 11, 2020
27 °C
ಜಿಲ್ಲೆಯಲ್ಲಿ ಸ್ವಯಂ ಲಾಕ್‌ಡೌನ್‌ಗೆ ವರ್ತಕರ ನಿರ್ಧಾರ

ಕೋಲಾರ | ವರ್ತಕರು ಸ್ವಯಂ ಲಾಕ್‌ಡೌನ್‌: ಮಧ್ಯಾಹ್ನ 2ರವರೆಗೆ ಮಾತ್ರ ವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕಾಗಿ ವರ್ತಕರು ಸ್ವಯಂ ಲಾಕ್‌ಡೌನ್‌ ಮಾಡುವ ಉದ್ದೇಶದಿಂದ ಜುಲೈ 15ರವರೆಗೆ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2ರವರೆಗೆ ಮಾತ್ರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ’ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಸುರೇಶ್ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೊರೊನಾ ಸೋಂಕು ಕೈ ಮೀರಿ ಹೋಗಿದೆ. ಮಾರ್ಚ್ 15ರಿಂದ 2 ತಿಂಗಳು ಲಾಕ್‌ಡೌನ್‌ ಮಾಡಲಾಗಿತ್ತು. ಆಗ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಿತ್ತು. ಹಂತ ಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡಿದ ಬಳಿಕ ಸೋಂಕು ಹೆಚ್ಚಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಕೆಲ ಗ್ರಾಹಕರು ಕೇಳುತ್ತಿಲ್ಲ. ಪರಿಸ್ಥಿತಿಯ ಗಂಭೀರತೆ ಅರಿತು ಸ್ವಯಂ ಲಾಕ್‌ಡೌನ್‌ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಬಟ್ಟೆ ವ್ಯಾಪಾರಿಗಳು, ಚಿನ್ನದಂಗಡಿ ಮಾಲೀಕರು ಸೇರಿದಂತೆ ಎಲ್ಲಾ ವರ್ತಕರು ಲಾಕ್‌ಡೌನ್‌ಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ಸ್ವಯಂ ಲಾಕ್‌ಡೌನ್‌ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುತ್ತಿದೆ. ಮಧ್ಯಾಹ್ನದ ನಂತರ ವಹಿವಾಟು ನಡೆಸದಿರಲು ಕೈಗೊಂಡಿರುವ ತೀರ್ಮಾನದ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಕೊಡುತ್ತೇವೆ. ಕೊರೊನಾ ಸೋಂಕಿನ ನಿಯಂತ್ರಣಕ್ಕೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ’ ಎಂದು ಹೇಳಿದರು.

ಸಹಕಾರ ಮುಖ್ಯ: ‘ಜಿಲ್ಲೆಯಲ್ಲಿ ಮಧ್ಯಾಹ್ನ 2 ಗಂಟೆ ನಂತರ ಯಾವುದೇ ರೀತಿಯ ವಹಿವಾಟು ನಡೆಸುವುದಿಲ್ಲ. ಜನರು ಕಟ್ಟುನಿಟ್ಟಾಗಿ ಸುರಕ್ಷತಾ ಮಾರ್ಗಸೂಚಿ ಪಾಲನೆ ಮಾಡಿದರೆ ಸೋಂಕು ಹರಡುವಿಕೆ ತಡೆಯಬಹುದು. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ’ ಎಂದು ಕೋರಿದರು.

ಜಿಲ್ಲಾ ವರ್ತಕರ ಒಕ್ಕೂಟದ ಪದಾಧಿಕಾರಿಗಳಾದ ವೆಂಕಟಚಲಪತಿ, ಶ್ರೀಧರ್, ಮಂಜುನಾಥ್, ಗೋವಿಂದರಾಜು, ಬದ್ರಿನಾಥ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು