ಶುಕ್ರವಾರ, ಜನವರಿ 24, 2020
17 °C
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರತ್ನಯ್ಯ ಅಭಿಪ್ರಾಯ

ವೃತ್ತಿ ಶಿಕ್ಷಣದಿಂದ ಸ್ವಾವಲಂಬಿ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕಲಿಕೆ ಜತೆಗೆ ಗಳಿಕೆ ಹಾಗೂ ಸ್ವಾವಲಂಬಿ ಬದುಕಿಗೆ ದಾರಿ ತೋರುವ ವೃತ್ತಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನ ಮತ್ತು ವೃತ್ತಿ ಶಿಕ್ಷಣ ಮಕ್ಕಳ ಶೈಕ್ಷಣಿಕ ಕಲಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಪಠ್ಯದ ಜತೆಯಲ್ಲೇ ಪಠ್ಯೇತರ ಚಟುವಟಿಕೆಗಳು ಸಹ ಸಮಗ್ರ ಶಿಕ್ಷಣದ ಭಾಗವಾಗಿವೆ. ಮಕ್ಕಳ ಬದುಕಿಗೆ ಆಸರೆಯಾಗುವ ವೃತ್ತಿ ಶಿಕ್ಷಣಕ್ಕೆ ಒತ್ತು ನೀಡಬೇಕು. ಶಾಲೆಯ ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ವೃತ್ತಿ ಶಿಕ್ಷಕರ ಪಾತ್ರ ಪಠ್ಯಕ್ಕೆ ಪೂರಕವಾಗಿದ್ದು, ಮಕ್ಕಳಲ್ಲಿ ಪರಿಸರಸ್ನೇಹಿ ಭಾವನೆ ಬಲಗೊಳಿಸುವಲ್ಲಿ ಹೆಚ್ಚು ಸಹಕಾರಿ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಪಾತಾಳ ತಲುಪಿದ್ದರೂ ರೈತರು ಇಡೀ ರಾಜ್ಯಕ್ಕೆ ತರಕಾರಿ ಬೆಳೆದು ನೀಡುತ್ತಿದ್ದಾರೆ. ರೈತರಿಗೆ  ಆಧುನಿಕ ತಾಂತ್ರಿಕತೆಯ ಅರಿವು ನೀಡಿದರೆ ಮತ್ತಷ್ಟು ಲಾಭದಾಯಕವಾಗಿ ಮುಂದೆ ಸಾಗಲು ಸಾಧ್ಯವಾಗುತ್ತದೆ. ವೃತ್ತಿ ಶಿಕ್ಷಕರು ಮಕ್ಕಳಲ್ಲಿ ಕೌಶಲ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ನಿರುದ್ಯೋಗ ತಾಂಡವ: ‘ಮಹಾತ್ಮ ಗಾಂಧೀಜಿಯ ಕನಸಾದ ಗೃಹ ಕೈಗಾರಿಕೆಗಳನ್ನು ಮರೆತ ಕಾರಣದಿಂದಲೇ ದೇಶದಲ್ಲಿ ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಗಾಂಧೀಜಿ ಕನಸಿನ ಮೂಲ ಶಿಕ್ಷಣವನ್ನು ಬಲಗೊಳಿಸಬೇಕಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ತಿಳಿಸಿದರು.

‘ವೃತ್ತಿ, ದೈಹಿಕ ಶಿಕ್ಷಕ, ಮುಖ್ಯ ಶಿಕ್ಷಕರು ತ್ರಿಮೂರ್ತಿಗಳಿದ್ದಂತೆ. ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು. ವಿಷಯ ಶಿಕ್ಷಕರು ಪಠ್ಯ ಕಲಿಸಿದರೂ ವೃತ್ತಿ ಶಿಕ್ಷಕರು ಕಲಿಕೆಗೆ ಪೂರಕವಾದ ಸುಂದರ ಪರಿಸರ ನಿರ್ಮಾಣ ಮಾಡುತ್ತಾರೆ. ಅಂಕಗಳತ್ತ ಮಾತ್ರ ಮಕ್ಕಳ ಓಟ ತಡೆದು ಬದುಕಿನತ್ತಲೂ ಗಮನ ಹರಿಸಲು ವೃತ್ತಿ ಶಿಕ್ಷಣ ಸಹಕಾರಿಯಾಗಿದೆ. ಶಿಕ್ಷಕರಲ್ಲೂ ಸಮರೋಪಾದಿಯ ಬದಲಾವಣೆ ಅಗತ್ಯ’ ಎಂದರು.

ಶಿಕ್ಷಣದಲ್ಲಿ ಮೀಸಲಾತಿ: ‘ಮಕ್ಕಳಿಗೆ ಅಂಕ ಗಳಿಕೆಗಿಂತ ಬದುಕು ರೂಪಿಸುವ ಶಿಕ್ಷಣ ಬೇಕು. ಪ್ರೌಢ ಶಾಲೆಯಲ್ಲಿ ವೃತ್ತಿ ಶಿಕ್ಷಣ ಕಲಿತವರಿಗೆ ಆ ವಿಷಯದ ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿ.ರುದ್ರಪ್ಪ ಮನವಿ ಮಾಡಿದರು.

‘ಎಲ್ಲರೂ ಎಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಪ್ರೌಢ ಶಾಲೆ ಹಂತದಲ್ಲೇ ಮಕ್ಕಳ ಬದುಕಿಗೆ ನೆರವಾಗುವ ಹೊಲಿಗೆ, ಬಡಗಿ, ರೇಷ್ಮೆ, ತೋಟಗಾರಿಕೆಯಂತಹ ವೃತ್ತಿಯ ಅರಿವು ನೀಡಿದರೆ ಅನುಕೂಲವಾಗುತ್ತದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ವಿಷಯ ಪರಿವೀಕ್ಷಕ ಬಿ.ವೆಂಕಟೇಶಪ್ಪ ಕಿವಿಮಾತು ಹೇಳಿದರು.

ಮೆಥೋಡಿಸ್ಟ್ ಕಾಲೇಜು ಪ್ರಾಂಶುಪಾಲೆ ಶಾಲಿನಿ, ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ನಾಗರಾಜ್‌, ಪದಾಧಿಕಾರಿಗಳಾದ ಮಾರ್ಕಂಡೇಶ್ವರ, ಆಂಜನೇಯ, ಧನಲಕ್ಷ್ಮೀ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು