ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ತಂಬಾಕು ಮಾರಾಟ ಅಪರಾಧ: ಡಾ.ಎಂ.ಎ.ಚಾರಿಣಿ

Last Updated 29 ಜನವರಿ 2020, 12:38 IST
ಅಕ್ಷರ ಗಾತ್ರ

ಕೋಲಾರ: ‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಂಬಾಕು ಮಾರಾಟ ಮಾಡುವುದು ಮತ್ತು ಮಕ್ಕಳಿಗೆ ತಂಬಾಕು ಮಾರುವುದು ಅಪರಾಧ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎ.ಚಾರಿಣಿ ತಿಳಿಸಿದರು.

ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ) ಅನುಷ್ಠಾನ ಕುರಿತು ಇಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯ ಸೆಕ್ಷನ್ 7ರ ಅನ್ವಯ ಬಿಡಿ- ಬಿಡಿಯಾಗಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ’ ಎಂದರು.

‘ಮಾರುಕಟ್ಟೆಯಲ್ಲಿ ಬಿಡಿ ಬಿಡಿಯಾಗಿ ಕಡ್ಡಿಪುಡಿ ಮಾರಾಟ, ದಾಸ್ತಾನು ಮತ್ತು ಆರೋಗ್ಯ ಸುರಕ್ಷತೆ ಎಚ್ಚರಿಕೆ ಸಂದೇಶವಿಲ್ಲದೆ ತಂಬಾಕು ಉತ್ಪನ್ನ ಮಾರಾಟ ಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ. ಧೂಮಪಾನ ನಿಷೇಧಿತ ಪ್ರದೇಶದಲ್ಲಿ ಧೂಮಪಾನ ಮಾಡಿದವರಿಗೆ ದಂಡ ವಿಧಿಸಲಾಗುತ್ತಿದೆ’ ಎಂದು ವಿವರಿಸಿದರು.

‘ನಿಷೇಧಿತ ಸ್ಥಳದಲ್ಲಿ ಧೂಮಪಾನ ಮಾಡಿದ ಸಂಬಂಧ ಕೋಲಾರದಲ್ಲಿ 115 ಪ್ರಕರಣ ದಾಖಲಿಸಿ ₹ 10,560 ದಂಡ ವಿಧಿಸಲಾಗಿದೆ. ಅದೇ ರೀತಿ ಮಾಲೂರಿನಲ್ಲಿ 149 ಪ್ರಕರಣಗಳಿಗೆ ₹ 12,130, ಬಂಗಾರಪೇಟೆಯಲ್ಲಿ 110 ಪ್ರಕರಣಗಳಿಗೆ ₹ 9,230, ಮುಳಬಾಗಿಲಿನಲ್ಲಿ 130 ಪ್ರಕರಣಕ್ಕೆ ₹ 10,280, ಶ್ರೀನಿವಾಸಪುರದಲ್ಲಿ 31 ಪ್ರಕರಣಗಳಿಗೆ ₹ 1,700 ದಂಡ ಹಾಕಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 535 ಪ್ರಕರಣ ದಾಖಲಿಸಿ ₹ 43,900 ದಂಡ ವಸೂಲಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಗುಲಾಬಿ ಆಂದೋಲನ: ‘ಧೂಮಪಾನಿಗಳಿಗೆ ವಿದ್ಯಾರ್ಥಿಗಳಿಂದ ಗುಲಾಬಿ ಹೂವು ಮತ್ತು ಕರಪತ್ರ ಕೊಡಿಸುವುದರೊಂದಿಗೆ ಧೂಮಪಾನ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಗುಲಾಬಿ ಆಂದೋಲನ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ತಂಬಾಕು ವ್ಯಸನದಿಂದ ಹೊರಬರಲು ವ್ಯಸನಿಗಳನ್ನು ಪ್ರೇರೇಪಿಸಿ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯ ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಿಸಲಾಗುತ್ತಿದೆ. ಈ ಕೇಂದ್ರದಲ್ಲಿ ತಂಬಾಕು ವ್ಯಸನಿಗಳಿಗೆ ಮಾರ್ಗದರ್ಶನ ನೀಡಿ ತಂಬಾಕು ಸೇವನೆಯಿಂದ ಹೊರಬರಲು ಪ್ರೇರೇಪಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಶಾಲಾ ಕಾಲೇಜುಗಳಿಂದ 100 ಮೀಟರ್‌ ಅಂತರದಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಕೇಂದ್ರ ಇರಬಾರದು. ಮಕ್ಕಳಿಗೆ ಸರಿಯಾದ ಮಾಹಿತಿ ನೀಡುವ ಮೂಲಕ ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತವಾಗಿ ಮಾಡಬೇಕು’ ಎಂದು ಸೂಚಿಸಿದರು.

ಮಾಲೂರು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ, ಆರೋಗ್ಯ ಇಲಾಖೆ ಅಧಿಕಾರಿಗಳು, ಪುರಸಭೆ ಮುಖ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT