ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ: ಹೊಸ ಬಾಡಿಗೆದಾರರಿಗೆ ಮಳಿಗೆ ಹಂಚಿಕೆ

ಠೇವಣಿ ಹಣ ಹಿಂದಿರುಗಿಸಲು ಮಳಿಗೆದಾರರ ಒತ್ತಾಯ
ಫಾಲೋ ಮಾಡಿ
Comments

ಕೋಲಾರ: ‘ಬಾಡಿಗೆ ಕರಾರು ಅವಧಿ ಮುಗಿದ ನಂತರವೂ ನಗರಸಭೆಯ ನಿಯಮಬಾಹಿರವಾಗಿ ವ್ಯಾಪಾರ ಮಾಡುತ್ತಿದ್ದ 205 ಮಳಿಗೆದಾರರ ಪೈಕಿ 150 ಮಂದಿಯನ್ನು ಮಳಿಗೆಗಳಿಂದ ಖಾಲಿ ಮಾಡಿಸಲಾಗಿದೆ. ಈ ಮಳಿಗೆಗಳನ್ನು ಹರಾಜಿನಲ್ಲಿ ಹೊಸ ಬಾಡಿಗೆದಾರರಿಗೆ ಹಂಚಿಕೆ ಮಾಡಲಾಗುತ್ತದೆ’ ಎಂದು ನಗರಸಭೆ ಆಯುಕ್ತ ಪ್ರಸಾದ್‌ ತಿಳಿಸಿದರು.

ಮಳಿಗೆದಾರರ ತೆರವು ಕಾರ್ಯಾಚರಣೆ ವೇಳೆ ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಾಡಿಗೆ ಅವಧಿ ಮುಗಿದಿರುವ ನಗರಸಭೆಯ 220 ಮಳಿಗೆಗಳನ್ನು ಒಂದೂವರೆ ವರ್ಷದ ಹಿಂದೆ ಬಹಿರಂಗ ಹರಾಜು ಮಾಡಲಾಗಿದ್ದು, ಈ ಮಳಿಗೆಗಳನ್ನು ಹೊಸ ಬಿಡ್‌ದಾರರಿಗೆ ಬಿಟ್ಟು ಕೊಡಬೇಕಿದೆ’ ಎಂದು ಹೇಳಿದರು.

‘ನಾಲ್ಕೈದು ದಶಕಗಳಿಂದ ನಗರಸಭೆ ಮಳಿಗೆಗಳನ್ನು ಬಾಡಿಗೆಗೆ ಪಡೆದಿರುವ ಹಳೆ ಮಳಿಗೆದಾರರ ಪೈಕಿ ಕೆಲವರು ಹರಾಜಿನಲ್ಲಿ ಪಾಲ್ಗೊಂಡು ನಿಯಮಾನುಸಾರ ಮತ್ತೆ ಮಳಿಗೆಗಳನ್ನು ಪಡೆದಿದ್ದಾರೆ. ಒಂದೂವರೆ ವರ್ಷದ ಹಿಂದೆ ಹರಾಜು ಪ್ರಕ್ರಿಯೆ ನಡೆದಿದ್ದರೂ ಈವರೆಗೆ ಹೊಸ ಬಿಡ್‍ದಾರರಿಗೆ ಮಳಿಗೆ ನೀಡಲು ಸಾಧ್ಯವಾಗಿರಲಿಲ್ಲ. ಬಾಡಿಗೆ ಕರಾರು ಅವಧಿ ಮುಗಿದಿರುವ ಮಳಿಗೆಗಳಲ್ಲಿನ ವ್ಯಾಪಾರಿಗಳಿಗೆ ಮಳಿಗೆ ಖಾಲಿ ಮಾಡುವಂತೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ಖಾಲಿ ಮಾಡಿರಲಿಲ್ಲ’ ಎಂದು ವಿವರಿಸಿದರು.

‘220 ಅಂಗಡಿಗಳ ಪೈಕಿ 15 ಮಂದಿ ಹಳೆ ಮಳಿಗೆದಾರರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಆ ಮಳಿಗೆದಾರರನ್ನೂ ಖಾಲಿ ಮಾಡಿಸುತ್ತೇವೆ. ಈಗ ಸ್ವಾಧೀನದಲ್ಲಿದ್ದು, ಮಳಿಗೆ ಖಾಲಿ ಮಾಡುತ್ತಿರುವ ಮಳಿಗೆದಾರರು ₹ 1 ಲಕ್ಷ ಠೇವಣಿ ಕಟ್ಟಿರುವುದಕ್ಕೆ ಸಂಬಂಧಿಸಿದಂತೆ ದಾಖಲೆಪತ್ರ ಒದಗಿಸಿದರೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಜಿಲ್ಲಾಧಿಕಾರಿ ಮೂಲಕ ಮರು ಪಾವತಿ ಮಾಡಲಾಗುತ್ತದೆ’ ಎಂದರು.

₹ 2.70 ಕೋಟಿ: ಮಳಿಗೆ ಖಾಲಿ ಮಾಡಲು ಆಕ್ಷೇಪಣೆ ವ್ಯಕ್ತಪಡಿಸಿ ಮಳಿಗೆದಾರ ಶಬ್ಬೀರ್‌, ‘42 ವರ್ಷದಿಂದ ನಗರಸಭೆ ಮಳಿಗೆಯಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಆರಂಭದಲ್ಲಿ ಮಳಿಗೆಗೆ ಮಾಸಿಕ ₹ 150 ಬಾಡಿಗೆಯಿತ್ತು. ನಗರಸಭೆ ಅಧಿಕಾರಿಗಳು ಇತ್ತೀಚೆಗೆ ₹ 1 ಲಕ್ಷ ಮುಂಗಡ ಹಣ ಪಡೆದುಕೊಂಡು 300 ಪಟ್ಟು ಬಾಡಿಗೆ ಹೆಚ್ಚಿಸುವುದಾಗಿ ಹೇಳಿ 248 ಮಂದಿ ಹಳೆ ಮಳಿಗೆದಾರರಿಂದ ಸುಮಾರು ₹ 2.70 ಕೋಟಿ ಹಣ ಕಟ್ಟಿಸಿಕೊಂಡಿದ್ದರು. ಇದೀಗ ₹ 55 ಲಕ್ಷ ಮಾತ್ರ ಇದೆ ಎಂದು ಹೇಳುತ್ತಿದ್ದಾರೆ. ಉಳಿದ ಹಣ ಎಲ್ಲಿ ಹೋಯಿತೆಂದು ಯಾರೂ ಹೇಳುತ್ತಿಲ್ಲ’ ಎಂದು ದೂರಿದರು.

‘ಅಂಗಡಿಗಳನ್ನು ಕೂಡಲೇ ಖಾಲಿ ಮಾಡಿ, ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಮ್ಮ ಹಣ ವಾಪಸ್‌ ಕೊಡುವುದಾಗಿ ನಗರಸಭೆ ಆಯುಕ್ತರು ಹೇಳುತ್ತಿದ್ದಾರೆ. ನಮ್ಮ ಹಣ ವಾಪಸ್‌ ಕೊಟ್ಟರೆ ಈಗಲೇ ಮಳಿಗೆ ಖಾಲಿ ಮಾಡಲು ಸಿದ್ಧವಿದ್ದೇವೆ. ಆದರೂ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದೆ ಬಲವಂತವಾಗಿ ಮಳಿಗೆಗಳ ಬೀಗ ತೆರೆಸಿ ಸರಕುಗಳನ್ನು ಹೊರಗೆ ಹಾಕಿಸುತ್ತಿದ್ದಾರೆ. ನಮ್ಮ ಹಣ ಯಾರು ಕೊಡುತ್ತಾರೆ?’ ಎಂದು ಪ್ರಶ್ನಿಸಿದರು.

‘ನಾವು ಕಟ್ಟಿರುವ ಠೇವಣಿ ಹಣ ವಾಪಸ್‌ ಕೊಟ್ಟರೆ ನಾವೇ ಅಂಗಡಿ ಖಾಲಿ ಮಾಡುತ್ತಿದ್ದೆವು. ಆದರೆ, ಅಧಿಕಾರಿಗಳು ಠೇವಣಿ ಹಣ ಹಿಂದಿರುಗಿಸದೆ ಪೊಲೀಸರೊಂದಿಗೆ ಬಂದು ದೌರ್ಜನ್ಯ ನಡೆಸಿ ಮಳಿಗೆ ಖಾಲಿ ಮಾಡಿಸುತ್ತಿದ್ದಾರೆ. ಅಧಿಕಾರಿಗಳು ಒಳ್ಳೆಯದಾಗಲ್ಲ, ಅವರಿಗೆ ನಮ್ಮ ಶಾಪ ತಟ್ಟದೇ ಬಿಡುವುದಿಲ್ಲ’ ಎಂದು ಮಳಿಗೆದಾರ ಬಹದ್ದೂರ್ ಸಾಬ್ ಕಿಡಿಕಾರಿದರು.

ಹಲವು ಮಳಿಗೆದಾರರು ಮಳಿಗೆ ಖಾಲಿ ಮಾಡಲು ಕಾಲಾವಕಾಶ ಕೊಡುವಂತೆ ಕೋರಿದರು. ಆದರೆ, ಅಧಿಕಾರಿಗಳು ಕಾಲಾವಕಾಶ ನೀಡಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT