ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ: ಶಾಸಕ ನಾರಾಯಣಸ್ವಾಮಿ ಅಚ್ಚರಿಯ ಹೇಳಿಕೆ

Last Updated 28 ಮಾರ್ಚ್ 2021, 13:40 IST
ಅಕ್ಷರ ಗಾತ್ರ

ಕೋಲಾರ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೂರಕ್ಕೆ ನೂರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ’ ಎಂದು ಬಂಗಾರಪೇಟೆ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಗೆ ಕೆ.ಸಿ ವ್ಯಾಲಿ ಯೋಜನೆ ಕೊಡುಗೆಯಾಗಿ ನೀಡಿದ ಸಿದ್ದರಾಮಯ್ಯ ಅವರೇ ಕೋಲಾರ ಕ್ಷೇತ್ರಕ್ಕೆ ಮುಂದಿನ ಅಭ್ಯರ್ಥಿ. ಅವರು ಇಲ್ಲಿ ಶಾಸಕರಾದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ನಾನು, ರಮೇಶ್‌ಕುಮಾರ್, ನಂಜೇಗೌಡ, ನಜೀರ್ ಅಹಮ್ಮದ್‌ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು ಕೋಲಾರ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸುತ್ತಿದ್ದೇವೆ. ಒಂದೆರೆಡು ತಿಂಗಳಿನಲ್ಲಿ ಎಲ್ಲಾ ಗೊಂದಲಗಳಿಗೆ ತೆರೆ ಬೀಳಲಿದೆ’ ಎಂದು ತಿಳಿಸಿದರು.

‘ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್‌ನವರಲ್ಲ. ಅವರಿಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಅವರು ಕಾಂಗ್ರೆಸ್‌ ಸೇರುವುದು ಕನಸಿನ ಮಾತು. ಅವರು ಹೇಳಿರುವಂತೆ ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಕೋಲಾರದಲ್ಲಿ ಅಭ್ಯರ್ಥಿಯಾಗುವುದಿಲ್ಲ. ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೆ ವರ್ತೂರು ಪ್ರಕಾಶ್‌ ಪಕ್ಷದ ವಾರಸುದಾರರಲ್ಲ’ ಎಂದು ಗುಡುಗಿದರು.

ಶೋಭೆಯಲ್ಲ

‘ಅಧಿಕಾರಿಗಳ ಮೇಲೆ ದರ್ಪ ತೋರುವುದು ಸಂಸದರಿಗೆ ಶೋಭೆಯಲ್ಲ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಅವಾಚ್ಯವಾಗಿ ನಿಂದಿಸಿರುವ ಸಂಸದರ ವರ್ತನೆ ಅಮಾನವೀಯ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಆರಂಭಕ್ಕೆ ಸಂಸದರ ಅನುಮತಿ ಪಡೆಯಬೇಕಿಲ್ಲ. ₹ 50 ಸಾವಿರ, ₹ 1 ಲಕ್ಷ, ₹ 5 ಲಕ್ಷದ ಕಾಮಗಾರಿಗಳಿಗೆ ಚಾಲನೆ ನೀಡಲು ಯಾವುದೇ ಶಾಸಕರು ಸಂಸದರನ್ನು ಕರೆದಿರುವುದನ್ನು 30 ವರ್ಷಗಳ ನನ್ನ ರಾಜಕೀಯ ಅನುಭವದಲ್ಲಿ ನೋಡಿಲ್ಲ. ಸಂಸದರು ಹಿಂಬಾಲಕರ ಮಾತು ಕೇಳಿಕೊಂಡು ಅಧಿಕಾರಿಗಳನ್ನು ನಿಂದಿಸಿರುವುದು ಖಂಡನೀಯ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT