ಗುರುವಾರ , ಏಪ್ರಿಲ್ 2, 2020
19 °C
ರೈತ ಸಂಘದಿಂದ ಧರಣಿ, ರಸ್ತೆ ತಡೆ

ಮುಕ್ತ ವ್ಯಾಪರಕ್ಕೆ ಸಹಿ: ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ದೇಶಕ್ಕೆ ಆಹ್ವಾನಿಸಿ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.

ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು ರಸ್ತೆ ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕೋಳಿ, ಹಾಲು ಉತ್ಪನ್ನಗಳ ಸಮೇತ ಪ್ರತಿಭಟನೆ ನಡಸಿದರು. ಇದರಿಂದ ಕೆಲ ನಿಮಿಷಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.

ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಮೇರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮ ಹಾಗೂ ಕೃಷಿ ಉತ್ಪಾದನಾ ವಸ್ತುಗಳನ್ನು ಮುಕ್ತ ವ್ಯಾಪಾರಕ್ಕೆ ಸಹಿ ಹಾಕಲು ತೀರ್ಮಾನಿಸಿದ್ದು, ಇದು ರೈತರ ಮರಣಶಾಸನವಾಗಲಿದೆ’ ಎಂದು ಅತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿ ಲಕ್ಷಾಂತರ ಮಂದಿ ರೈತರು ಹೈನೋದ್ಯಮ ಮತ್ತು ಕುಕ್ಕುಟೋದ್ಯಮ ನಂಬಿ ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಉತ್ಪಾದನೆಯಾಗಿರುವ ಹಾಲು ಮಾರಾಟವಾಗುತ್ತಿಲ್ಲ ಎಂಬ ಅತಂಕ ಎದುರಾಗಿರುವ ದಿನಗಳಲ್ಲಿ ಅಮೇರಿಕಾದಿಂದ ಹಾಲಿನ ಉತ್ಪಾದನಗಳನ್ನು ತರಿಸಿಕೊಳ್ಳುವ ಅನಿವಾರ್ಯತೆ ಏನಿತ್ತು’ ಎಂದು ಪ್ರಶ್ನಿಸಿದರು.

‘ದೇಶಕ್ಕೆ ಅಗುವಷ್ಟು ಕೋಳಿಮಾಂಸವನ್ನು ಸ್ವದೇಶಿ ಉದ್ಯಮಿಗಳು ಉತ್ಪಾದಿಸಿಕೊಡುತ್ತಿದ್ದಾರೆ. ಅಮೇರಿಕಾದಲ್ಲಿ ಚುನಾವಣೆ ಸಮೀಪಿಸುತ್ತಿದ್ದು ರಾಜಕೀಯ ಲಾಭಕ್ಕೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ನರೇಂದ್ರ ಮೋದಿ ತೀರ್ಮಾನವನ್ನು ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಹಿಂದೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಗೆ ಮಣಿದು ವಾಪಸ್ ಪಡೆಯಿತು. ಒಪ್ಪಂದಕ್ಕೆ ಸಹಿ ಹಾಕದೆ ಈಗ ಭಾರತಕ್ಕೆ ಬರುತ್ತಿರುವ ಡೋನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿರುವ ನೆಪದಲ್ಲಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿರುವುದು ರೈತ ವಿರೋಧಿ ದೋರಣೆಯಾಗಿದೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ‘ದೇಶದಲ್ಲಿ ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸುವ ನಿಟ್ಟಲಿನಲ್ಲಿ ಮುಕ್ತವ್ಯಾಪಾರಕ್ಕೆ ಸಹಿ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ರೈತರ ಮರಣ ಶಾಸನ ಜಾರಿಗೆ ತರುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಗೌರವಾಧ್ಯಕ್ಷ ತಿಮ್ಮಣ್ಣ, ಸದಸ್ಯರಾದ ವೆಂಕಟೇಶಪ್ಪ, ನಾಗೇಶ್, ಮಂಜುನಾಥ, ಕೇಶವ, ವೇಣು, ರಾಜು, ವೆಂಕಟೇಶಪ್ಪ, ಸಹದೇವಣ್ಣ, ವೆಂಕಟೇಶ್, ಗಣೇಶ್, ಪ್ರತಾಪ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು