ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಬೋಧನೆ ಜತೆಗೆ ಕೌಶಲ ತರಬೇತಿ ನೀಡಿ: ಶ್ರೀನಿವಾಸಗೌಡ

ಕಾನೂನು ಕಾಲೇಜು ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಸಲಹೆ
Last Updated 1 ಸೆಪ್ಟೆಂಬರ್ 2018, 15:20 IST
ಅಕ್ಷರ ಗಾತ್ರ

ಕೋಲಾರ: ‘ಉಪನ್ಯಾಸಕರು ಪಠ್ಯ ಬೋಧನೆ ಜತೆಗೆ ವಿದ್ಯಾರ್ಥಿಗಳಿಗೆ ವಕೀಲ ವೃತ್ತಿಯ ಕೌಶಲ ತರಬೇತಿ ನೀಡಿದರೆ ವೃತ್ತಿಪರತೆ ಬರುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಸಲಹೆ ನೀಡಿದರು.

ತಾಲ್ಲೂಕಿನ ಅರಹಳ್ಳಿ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶನಿವಾರ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಗಲಾಟೆ ಪ್ರವೃತ್ತಿ ಹೆಚ್ಚುತ್ತಿದೆ. ಜತೆಗೆ ರ‍್ಯಾಗಿಂಗ್‌ ಪಿಡುಗು ಶುರುವಾಗಿದೆ’ ಎಂದು ವಿಷಾದಿಸಿದರು

‘ಶ್ರದ್ಧೆ, ಶಿಸ್ತು, ಆಸಕ್ತಿ ಇದ್ದರೆ ಮಾತ್ರ ವಿದ್ಯಾವಂತರಾಗಲು ಸಾಧ್ಯ. ವಿದ್ಯಾವಂತರಾಗಿ ಹಣ ಗಳಿಕೆಗಷ್ಟೇ ಸೀಮಿತವಾಗದೆ ಸಮಾಜಮುಖಿ ಕಾರ್ಯಕ್ಕೆ ಆದ್ಯತೆ ನೀಡಬೇಕು. ಕಾಲೇಜಿನಲ್ಲಿ ಏನೇ ಸಮಸ್ಯೆ ಎದುರಾದರೂ ನನ್ನ ಗಮನಕ್ಕೆ ತಂದರೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಈ ಹಿಂದೆ ನಾನು ಶಾಸಕನಾಗಿದ್ದಾಗ ಕಾನೂನು ಕಾಲೇಜು ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿಸಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದೆ. ನಂತರ ಶಾಸಕನಾದ ಪುಣ್ಯತ್ಮ ಸರ್ಕಾರಿ ಕಾಲೇಜುಗಳ ಅಭಿವೃದ್ಧಿಯತ್ತ ಗಮನ ಹರಿಸಲಿಲ್ಲ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್‌ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಪ್ರಮುಖ ಪಾತ್ರ: ‘ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಯುವ ವಕೀಲರಿಗೆ ಹಣ ಸಂಪಾದನೆಯೇ ಮುಖ್ಯವಾಗಿದೆ. ವೃತ್ತಿ ಗೌರವ ಕಾಪಾಡುವ ನಿಟ್ಟಿನಲ್ಲಿ ವಕೀಲರು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು’ ಎಂದು ವಕೀಲ ಕೆ.ವಿ.ಶಂಕರಪ್ಪ ಕಿವಿಮಾತು ಹೇಳಿದರು.

‘ವಕೀಲ ವೃತ್ತಿ ಬಗ್ಗೆ ಸಾರ್ವಜನಿಕರಲ್ಲಿ ಕೀಳರಿಮೆ ಇದೆ. ವಕೀಲರಾದವರನ್ನು ಪ್ರೋತ್ಸಾಹಿಸುವವರೂ ಕಡಿಮೆ. ಕಾನೂನು ಶಿಕ್ಷಣ ಸಂದರ್ಭದಲ್ಲಿ ವೃತ್ತಿಗೆ ಸಂಬಂಧಿಸಿದಂತೆ ಶೇ 10ರಷ್ಟು ಮಾತ್ರ ಕಲಿಯುತ್ತೇವೆ. ವೃತ್ತಿ ಆರಂಭಿಸಿ ನ್ಯಾಯಾಲಯ ಕಲಾಪದಲ್ಲಿ ಭಾಗಿಯಾದ ನಂತರ ಶೇ 90ರಷ್ಟು ಕಲಿಯುತ್ತೇವೆ. ಹೀಗಾಗಿ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ ತರಬೇತಿ ನೀಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ತಡೆಗೋಡೆ ನಿರ್ಮಾಣ: ‘ನರೇಗಾ ಯೋಜನೆಯಡಿ ಕಾಲೇಜಿನ ಸುತ್ತ ತಡೆಗೋಡೆ (ಕಾಪೌಂಡ್‌) ನಿರ್ಮಿಸಲಾಗುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಭವನ ನಿರ್ಮಾಣಕ್ಕೆ ₹ 2 ಲಕ್ಷ ನೀಡಲಾಗುವುದು. ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಜಾಗ ಕಲ್ಪಿಸಲು ಶಾಸಕರು ಸಹಕರಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಮನವಿ ಮಾಡಿದರು.

ಬಹುಮಾನ ವಿತರಣೆ: ರ್‍ಯಾಂಕ್‌ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಯರಾಮ್, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣ್‌ಪ್ರಸಾದ್‌, ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎಂ.ಅನಿತಾ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್‌ಗೌಡ, ರಾಜ್ಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ, ರಾಜ್ಯ ಬೀಜ ನಿಗಮದ ನಿರ್ದೇಶಕ ಡಿ.ಎಲ್.ನಾಗರಾಜ್, ಅರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಬೂಬ್ ಜಾನ್, ಹೇಮಾದ್ರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮುನಿವೆಂಕಟಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT