ಮಂಗಳವಾರ, ಜೂನ್ 22, 2021
27 °C
ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ಬಾಬು ಹೇಳಿಕೆ

ಧರ್ಮ ರಕ್ಷಣೆ ಜತೆಗೆ ಸಾಮಾಜಿಕ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನಗರದ ವಿವಿಧ ಬಡಾವಣೆಗಳ ಬಡ ಕುಟುಂಬಗಳಿಗೆ ಬಜರಂಗದಳ ಸಂಘಟನೆ ವತಿಯಿಂದ ಇಲ್ಲಿ ಬುಧವಾರ ದಿನಸಿ ಕಿಟ್ ಹಾಗೂ ತರಕಾರಿ ವಿತರಿಸಲಾಯಿತು.

ಭೋವಿ ಕಾಲೊನಿಯಲ್ಲಿ ದಿನಸಿ ವಸ್ತುಗಳ ಕಿಟ್ ವಿತರಿಸಿ ಮಾತನಾಡಿ ಬಜರಂಗದಳ ಜಿಲ್ಲಾ ಘಟಕದ ಸಂಚಾಲಕ ಬಾಬು, ‘ಸಂಘಟನೆಯು ಧರ್ಮ ರಕ್ಷಣೆ ಜತೆಗೆ ಸಾಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೂ ನೆರವಾಗಿದ್ದೇವೆ’ ಎಂದು ತಿಳಿಸಿದರು.

‘ಕೋವಿಡ್ ಭೀತಿಯಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಸಾಕಷ್ಟು ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಅನಿವಾರ್ಯವಾಗಿ ಲಾಕ್‌ಡೌನ್‌ ಘೋಷಿಸಿದೆ. ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸುವ ಬಡ ಕುಟುಂಬಗಳು ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಅಂತಹ ಕುಟುಂಬಗಳಿಗೆ ಕೈಲಾದಷ್ಟು ನೆರವು ನೀಡುತ್ತಿದ್ದೇವೆ’ ಎಂದರು.

‘ಜಿಲ್ಲೆಯಾದ್ಯಂತ ಸಂಘಟನೆ ಕಾರ್ಯಕರ್ತರು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್, ವೈದ್ಯಕೀಯ ಆಮ್ಲಜನಕದ ಸಮಸ್ಯೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಕೆಲವರು ಸಾವಿನಲ್ಲೂ ಹಣ ಮಾಡಲು ಹೊರಟಿರುವುದು ಆಘಾತಕಾರಿ’ ಎಂದು ಬಜರಂಗದಳ ಮುಖಂಡ ಬಾಲಾಜಿ ಕಳವಳ ವ್ಯಕ್ತಪಡಿಸಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆಯ ಅಗತ್ಯವಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ನಿಯಮಬಾಹಿರವಾಗಿ ಹಾಸಿಗೆ ಕಾಯ್ದಿರಿಸಿ ಹಣದ ದಂಧೆ ನಡೆಸುತ್ತಿರುವ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಆಸ್ಪತ್ರೆಗಳಲ್ಲೂ ಈ ರೀತಿಯ ದಂಧೆ ನಡೆಯುತ್ತಿದ್ದು, ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಮನವಿ ಮಾಡಿದರು.

ಲಸಿಕೆ ಹಾಕಿಸಿಕೊಳ್ಳಿ: ‘ಕೋವಿಡ್ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ಅದಕ್ಕೆ ಜಾತಿ, ಧರ್ಮ, ಬಡವ, ಶ್ರೀಮಂತರೆಂಬ ಬೇಧವಿಲ್ಲ, ಎಲ್ಲರಿಗೂ ಕೊರೊನಾ ಸೋಂಕು ಬರುತ್ತದೆ ಎಂಬ ಸತ್ಯ ಅರಿತು ಪ್ರತಿಯೊಬ್ಬರೂ ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಬಜರಂಗದಳದ ಸದಸ್ಯರಾದ ವಿಜಯ್‌ಕುಮಾರ್, ವಿಶ್ವನಾಥ್, ಶ್ರೀಧರ್, ವೆಂಕಿ, ಮಹೇಶ್, ವಿನಯ್, ಪವನ್, ಹೇಮಂತ್, ಸಾಯಿ ಸುಮನ್, ಪ್ರವೀಣ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.