ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಗ್ರಾ.ಪಂಗೆ ಮಣ್ಣು ಪರೀಕ್ಷೆ ಕೇಂದ್ರ: ಕೃಷಿ ಸಚಿವ ಪಾಟೀಲ

ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಕೆ: ಕೃಷಿ ಸಚಿವ ಪಾಟೀಲ ಭರವಸೆ
Last Updated 17 ನವೆಂಬರ್ 2020, 15:57 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಂದು ಮಣ್ಣು ಪರೀಕ್ಷೆ ಕೇಂದ್ರ ತೆರೆಯುತ್ತೇವೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಭರವಸೆ ನೀಡಿದರು.

ಇಲ್ಲಿ ಮಂಗಳವಾರ ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿ, ‘ಕೃಷಿಯಲ್ಲಿ ಮಣ್ಣು ಪರೀಕ್ಷೆ ಬಹಳ ಮುಖ್ಯ. ರಾಜ್ಯದಲ್ಲಿ ಸದ್ಯ 247 ಮಣ್ಣು ಪರೀಕ್ಷೆ ಕೇಂದ್ರಗಳಿವೆ. ರಾಜ್ಯದಲ್ಲಿ 27 ಸಾವಿರ ಹಳ್ಳಿಗಳಿದ್ದು, ಪ್ರತಿ ಗ್ರಾ.ಪಂಗೆ ಒಂದು ಮಣ್ಣು ಪರೀಕ್ಷೆ ಕೇಂದ್ರ ತೆರೆಯುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಕೊಪ್ಪಳ ಜಿಲ್ಲೆಯಲ್ಲಿ ನವೆಂಬರ್‌ ಅಂತ್ಯಕ್ಕೆ ಪ್ರಾಯೋಗಿಕವಾಗಿ ಮಣ್ಣು ಪರೀಕ್ಷೆ ವಾಹನ ಸೇವೆ ಆರಂಭಿಸಲಾಗುತ್ತದೆ. ಜತೆಗೆ ಅಲ್ಲಿನ ರೈತರಿಗೆ ಗುರುತಿನ ಚೀಟಿ ವಿತರಿಸಲಾಗುತ್ತದೆ. ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸಂಖ್ಯೆ ಕಡಿಮೆಯಿದೆ. ರೈತರ ಹಿತದೃಷ್ಟಿಯಿಂದ ಹೆಚ್ಚಾಗಿ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳನ್ನು ತೆರೆಯಬೇಕು’ ಎಂದು ಸಲಹೆ ನೀಡಿದರು.

‘ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಕೋಲಾರ ಜಿಲ್ಲೆಯ ರೈತರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ನೀರಿನ ಕೊರತೆ ನಡುವೆಯೂ ಉತ್ತಮವಾಗಿ ಬೆಳೆ ಬೆಳೆಯುತ್ತಿರುವ ಇಲ್ಲಿನ ರೈತರಿಗೆ ಮಣ್ಣಿನ ರುಚಿ ಗೊತ್ತಿದೆ. ಇಲ್ಲಿನ ರೈತರು ಬೇರೆ ಬೇರೆ ಜಿಲ್ಲೆಗಳಲ್ಲಿ ಹೋಗಿ ಜಮೀನು ಖರೀದಿಸಿ ಕೃಷಿ ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆತ್ಮಹತ್ಯೆ ಬೇಡ: ‘ರೈತರು ಪ್ರತಿಭಟನೆ ಮಾಡಿ ಬೆಳೆ ಬೆಳೆಯದಿದ್ದರೆ ಇಡೀ ಜಗತ್ತು ಹಸಿವಿನಿಂದ ನರಳಬೇಕಾಗುತ್ತದೆ. ಆದರೆ, ಪ್ರಕೃತಿಯ ಜತೆಗಿನ ರೈತರ ಬದುಕು ಜೂಜಾಟದಂತಾಗಿದೆ. ರೈತರು ಪ್ರಕೃತಿ ನಂಬಿ ಕೃಷಿ ಮಾಡಬೇಕಿದೆ. ಬೆಳೆ ನಷ್ಟವಾಯಿತು ಅಥವಾ ಕೃಷಿ ಉತ್ಪನ್ನಗಳ ಬೆಲೆ ಕುಸಿಯಿತು ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

‘ಜಿಲ್ಲೆಯಲ್ಲಿ ಈ ವರ್ಷ ಶೇ 22ರಷ್ಟು ಹೆಚ್ಚು ಮಳೆಯಾಗಿದೆ ಮತ್ತು ಶೇ 15ರಷ್ಟು ಹೆಚ್ಚು ಬಿತ್ತನೆಯಾಗಿದೆ. ರೈತರಿಗೆ ಆತ್ಮಸ್ಥೈರ್ಯ ತುಂಬಿ ಸ್ವಾಭಿಮಾನದಿಂದ ಬದುಕುವಂತೆ ಮಾಡಬೇಕು. ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕತೆ ಅಳವಡಿಸಿಕೊಂಡು ಸ್ವಾಭಿಮಾನಿಗಳಾಗಬೇಕು’ ಎಂದು ಸಲಹೆ ನೀಡಿದರು.

ಕಡತಕ್ಕೆ ಸೀಮಿತವಾಗಬಾರದು: ‘ಸರ್ಕಾರದ ಯೋಜನೆಗಳು ಕಚೇರಿ ಕಡತಕ್ಕೆ ಸೀಮಿತವಾಗಬಾರದು. ಯೋಜನೆಗಳ ಪ್ರಯೋಜನ ರೈತರಿಗೆ ತಲುಪಿದಾಗ ಮಾತ್ರ ಯೋಜನೆ ಸಾರ್ಥಕವಾಗುತ್ತದೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಭಿಪ್ರಾಯಪಟ್ಟರು.

‘ದೇಶದಲ್ಲೇ ಅತಿ ಹೆಚ್ಚು ಕೆರೆಗಳು ಕೋಲಾರ ಜಿಲ್ಲೆಯಲ್ಲಿವೆ. ನೀರಿನ ಕೊರತೆ ನಡುವೆಯೂ ಯಶಸ್ವಿಯಾಗಿ ಕೃಷಿ ನಿರ್ವಹಣೆ ಮಾಡುತ್ತಿರುವ ಜಿಲ್ಲೆಯ ರೈತರು ಇತರೆ ಜಿಲ್ಲೆಗಳ ರೈತರಿಗೆ ಮಾದರಿಯಾಗಿದ್ದಾರೆ. ಭವಿಷ್ಯದಲ್ಲಿ ಜಿಲ್ಲೆಯು ಭತ್ತದ ಬೆಳೆಯಲ್ಲಿ ಪ್ರಥಮ ಸ್ಥಾನಕ್ಕೆ ಬರುವುದರಲ್ಲಿ ಸಂಶಯವಿಲ್ಲ’ ಎಂದರು.

‘ರೈತರು ಹಣದಾಸೆಗೆ ಜಮೀನು ಮಾರಾಟ ಮಾಡಬಾರದು. ಮುಂದಿನ ಪೀಳಿಗೆಗಾಗಿ ಜಮೀನು ಉಳಿಸಬೇಕು. ಅಧಿಕಾರಿಗಳು ಶಾಸಕರು ಅಥವಾ ಸಚಿವರನ್ನು ಮೆಚ್ಚಿಸುವುದಕ್ಕೆ ಕೆಲಸ ಮಾಡುವುದನ್ನು ಬಿಟ್ಟು ರೈತರ ಹಿತಕ್ಕಾಗಿ ದುಡಿಯಬೇಕು’ ಎಂದು ಸೂಚಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಿರ್ಮಲಾ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿ.ಪಂ ಸಿಇಒ ಎಂ.ಆರ್.ರವಿಕುಮಾರ್, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಜಂಟಿ ನಿರ್ದೇಶಕಿ ವಿ.ಡಿ.ರೂಪದೇವಿ, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT