ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಆಲೂಗಡ್ಡೆ ದರ ನಿಗದಿ

ನ್ಯಾಯಯುತವಾಗಿ ವಹಿವಾಟು ನಡೆಸಿ: ವರ್ತಕರಿಗೆ ಜಿಲ್ಲಾಧಿಕಾರಿ ಸತ್ಯಭಾಮ ಸೂಚನೆ
Last Updated 22 ಅಕ್ಟೋಬರ್ 2020, 14:51 IST
ಅಕ್ಷರ ಗಾತ್ರ

ಕೋಲಾರ: ‘ಹೊರ ರಾಜ್ಯಗಳಲ್ಲಿ ಬಿತ್ತನೆ ಆಲೂಗಡ್ಡೆಯ ದರದ ಸಂಬಂಧ ವರದಿ ಪಡೆದು ಜಿಲ್ಲೆಯಲ್ಲೂ ಬೆಲೆ ನಿಗದಿಪಡಿಸಲಾಗುತ್ತದೆ. ವರ್ತಕರು ಇದೇ ದರಕ್ಕೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆದೇಶಿಸಿದರು.

ಇಲ್ಲಿ ಗುರುವಾರ ನಡೆದ ಬಿತ್ತನೆ ಆಲೂಗಡ್ಡೆ ಮಾರಾಟಗಾರರು ಮತ್ತು ರೈತಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ವರ್ತಕರು ಬಿತ್ತನೆ ಆಲೂಗಡ್ಡೆಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ರೈತರನ್ನು ಶೋಷಿಸುತ್ತಿರುವ ಸಂಬಂಧ ಸಾಕಷ್ಟು ದೂರು ಬಂದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಆಲೂಗಡ್ಡೆ ಬಿತ್ತನೆ ಆರಂಭಕ್ಕೂ ಮುನ್ನ 1 ತಿಂಗಳು ಮುಂಚಿತವಾಗಿ ಸಭೆ ನಡೆಸಿ ದರ ನಿಗದಿಪಡಿಸಲಾಗುತ್ತದೆ. ವಿವಿಧ ರಾಜ್ಯಗಳಲ್ಲಿನ ಬಿತ್ತನೆ ಆಲೂಗಡ್ಡೆ ಮಾದರಿಗಳ ಬಗ್ಗೆ ಅಧ್ಯಯನ ನಡೆಸಿ ಸಾಗಣೆ ವೆಚ್ಚ, ಲಾಭದ ಪ್ರಮಾಣ ಸೇರಿದಂತೆ ಎಲ್ಲಾ ಅಂಶಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಮಾರಾಟ ದರ ನಿಗದಿಪಡಿಸಲಾಗುತ್ತದೆ. ಇದರಿಂದ ರೈತರ ಶೋಷಣೆ ತಪ್ಪಲಿದೆ’ ಎಂದು ಅಭಿಪ್ರಾಯಪಟ್ಟರು.

‘ಬಿತ್ತನೆ ಆಲೂಗಡ್ಡೆ ಮಾರಾಟಗಾರರು ರೈತರೊಂದಿಗೆ ಸ್ನೇಹ ಸಂಬಂಧ ಉಳಿಸಿಕೊಂಡು ನ್ಯಾಯಯುತವಾಗಿ ವಹಿವಾಟು ನಡೆಸಬೇಕು. ಅಂಗಡಿಗಳಲ್ಲಿ ಕಡ್ಡಾಯವಾಗಿ ದರಪಟ್ಟಿ ಹಾಕಬೇಕು. ಆನ್‌ಲೈನ್‌ನಲ್ಲೂ ದರಪಟ್ಟಿ ಇರಬೇಕು’ ಎಂದು ಸೂಚನೆ ನೀಡಿದರು.

‘ವರ್ತಕರು ಹೆಚ್ಚಿನ ಲಾಭದಾಸೆಗೆ ಬಿತ್ತನೆ ಆಲೂಗಡ್ಡೆಯ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ತೊಂದರೆ ಮಾಡಬಾರದು. ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಪ್ರತ್ಯೇಕವಾಗಿ ಪರವಾನಗಿ ಪಡೆಯಬೇಕು. ಜತೆಗೆ ರೈತರಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು. ಈ ನಿಯಮಗಳನ್ನು ಉಲ್ಲಂಘಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

ದುಪ್ಪಟ್ಟು ಬೆಲೆ: ‘ಜಿಲ್ಲೆಯಲ್ಲಿ ಬಿತ್ತನೆ ಆಲೂಗಡ್ಡೆಯನ್ನು ದುಪ್ಪಟ್ಟು ಬೆಲೆಗೆ ಮಾರಲಾಗುತ್ತಿದೆ. ಈ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರದಿಂದಲೇ ಬಿತ್ತನೆ ಆಲೂಗಡ್ಡೆ ವಿತರಿಸಬೇಕು. ಕೃಷಿ ಸಲಕರಣೆಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿರುವಂತೆ ಗುತ್ತಿಗೆದಾರರ ಮೂಲಕ ಬಿತ್ತನೆ ಆಲೂಗಡ್ಡೆ ನೀಡಿದರೆ ರೈತರ ಅಲೆದಾಟ ತಪ್ಪಿಸಬಹುದು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಉಪಾಧ್ಯಕ್ಷ ಕೆ.ನಾರಾಯಣಗೌಡ ಸಲಹೆ ನೀಡಿದರು.

‘ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕು. ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿರುವ ಬಿತ್ತನೆ ಆಲೂಗಡ್ಡೆಯ ಗುಣಮಟ್ಟ ಚೆನ್ನಾಗಿಲ್ಲ. ಜತೆಗೆ ಬೆಳೆಗೆ ರೋಗಬಾಧೆ ಹೆಚ್ಚಿದೆ. ಇದರಿಂದ ಹೆಚ್ಚಿನ ಇಳುವರಿ ಬಾರದೆ ರೈತರಿಗೆ ನಷ್ಟವಾಗುತ್ತಿದೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿತ್ತನೆ ಆಲೂಗಡ್ಡೆ ವ್ಯಾಪಾರಿಗಳು, ‘ಎಲ್ಲಾ ಪರಿಶೀಲನೆ ಮಾಡಿ ಗುಣಮಟ್ಟದ ಬಿತ್ತನೆ ಆಲೂಗಡ್ಡೆಯನ್ನೇ ತರಿಸುತ್ತೇವೆ. ಆದರೆ, ಮಳೆಯ ಕಾರಣಕ್ಕೆ ಬೆಳೆಯಲ್ಲಿ ಏರುಪೇರಾಗುತ್ತಿದೆ’ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಎಂ.ಗಾಯತ್ರಿ, ರೈತ ಮುಖಂಡರಾದ ಶಿವಪ್ಪ, ಕೆ.ಶ್ರೀನಿವಾಸಗೌಡ, ಟಿ.ಎನ್.ರಾಮೇಗೌಡ, ನಳಿನಿಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT