ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗ ನಿವಾರಣೆಗೆ ಕ್ರೀಡೆ ಮದ್ದು

Last Updated 22 ಜನವರಿ 2020, 16:05 IST
ಅಕ್ಷರ ಗಾತ್ರ

ಕೋಲಾರ: ‘ಆರೋಗ್ಯ ನಿರ್ವಹಣೆಗೆ ಕ್ರೀಡೆ ಅಮೂಲ್ಯ ಸಾಧನ. ಮಕ್ಕಳ ಸರ್ವತ್ತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾಸಕ್ತಿಯಿರುವ ಮಕ್ಕಳನ್ನು ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು’ ಎಂದು ಸಮಾಜ ಸೇವಕ ಕೃಷ್ಣೇಗೌಡ ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ತಾಲ್ಲೂಕಿನ ಗುಟ್ಟಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಸಮಗ್ರ ಶಿಕ್ಷಣದ ಭಾಗವಾದ ಕ್ರೀಡೆಯು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.

‘ಮಕ್ಕಳು ಆರೋಗ್ಯವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಸಾಧನೆ ಮಾಡಲು ಸಾಧ್ಯ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎಂಬ ಮಾತಿನಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವವಿದೆ’ ಎಂದರು.

‘ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿರುವ ಕ್ರೀಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಬದಲಿಗೆ ಭಾಗವಹಿಸುವಿಕೆ ಮುಖ್ಯ. ಕ್ರೀಡೆಗಳಿಂದ ಸ್ಪರ್ಧಾ ಮನೋಭಾವ ಮೂಡುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸಿದರೆ ಒತ್ತಡ ನಿವಾರಣೆಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಆಧುನಿಕತೆ ಬೆಳೆದಂತೆ ಕ್ರೀಡೆಗಳು ಮರೆಯಾಗುತ್ತಿವೆ. ಈ ಹಿಂದೆ ಗ್ರಾಮೀಣ ಕ್ರೀಡೆಗಳು ಹೆಚ್ಚು ಚಾಲ್ತಿಯಲ್ಲಿದ್ದವು. ಆದರೆ, ಈಗ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿದಿವೆ. ದೈಹಿಕ ಚಟುವಟಿಕೆ ಕಡಿಮೆಯಾಗಿರುವುದರಿಂದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ರೋಗ ನಿವಾರಣೆಗೆ ಕ್ರೀಡೆ ಒಳ್ಳೆಯ ಮದ್ದು’ ಎಂದು ತಿಳಿಸಿದರು.

ಗಮನ ಹರಿಸಿ: ‘ಯುವಕರು ಇತ್ತೀಚೆಗೆ ಮೊಬೈಲ್ ಹಾಗೂ ಕಂಪ್ಯೂಟರ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ. ಪೋಷಕರು ಮಕ್ಕಳ ಬಗ್ಗೆ ಗಮನ ಹರಿಸಬೇಕು’ ಎಂದು ಹೇಳಿದರು.

ಹೋಬಳಿ ಮಟ್ಟಡ ಕ್ರೀಡೆಯಲ್ಲಿ ಮ್ಯೂಸಿಕಲ್‌ ಚೇರ್ ಸ್ಪರ್ಧೆಯಲ್ಲಿ ತನುಶ್ರೀ ಮತ್ತು ಪ್ರತಿಭಾ ಗೆಲುವು ಸಾಧಿಸಿದರು. ವಾಲಿಬಾಲ್‌ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ವಿವೇಕಾನಂದ ತಂಡ ಮತ್ತು ಬಾಲಕಿಯರ ವಿಭಾಗದಲ್ಲಿ ಹೇಮಾ ತಂಡ, ಕಬ್ಬಡಿಯಲ್ಲಿ ಸ್ಪಪ್ನ ತಂಡವು ಗೆಲುವು ಸಾಧಿಸಿತು.

ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಬು, ಸದಸ್ಯ ಪ್ರಭಾಕರ್, ಶಿಕ್ಷಣ ಸಂಯೋಜಕ ವೆಂಕಟರವಣಪ್ಪ, ಮುಖ್ಯ ಶಿಕ್ಷಕ ಬಿ.ಎಸ್.ಸತೀಶ್, ಶಿಕ್ಷಕರಾದ ವಿನಾಯಕ್, ಚನ್ನಬಸವರಾಜ, ಮಂಜುನಾಥ್, ಅಬ್ದುಲ್ ಗಫಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT