ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ‘ಎ’ ಶ್ರೇಣಿ ಪಟ್ಟಿಯಲ್ಲಿ ಸ್ಥಾನ: ಜಿಲ್ಲೆಗೆ ರಚನಾ ಪ್ರಥಮ

ಎಸ್ಸೆಸ್ಸೆಲ್ಸಿ ಫಲಿತಾಂಶ: ಗುಣಾತ್ಮಕತೆಯಲ್ಲಿ ಗೌರವ ದಾಖಲಿಸಿದ ಜಿಲ್ಲೆ
Last Updated 10 ಆಗಸ್ಟ್ 2020, 14:46 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ‘ಎ’ ಶ್ರೇಣಿ ಪಡೆದ 10 ಜಿಲ್ಲೆಗಳ ಪಟ್ಟಿಯಲ್ಲಿ ಕೋಲಾರವೂ ಸ್ಥಾನ ಪಡೆದುಕೊಳ್ಳುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿದೆ.

ಇದೇ ಮೊದಲ ಬಾರಿಗೆ ಗ್ರೇಡ್ ಆಧಾರದಂತೆ ಜಿಲ್ಲಾವಾರು ಫಲಿತಾಂಶ ನೀಡಲಾಗಿದ್ದು, ಜಿಲ್ಲೆಯು ಎ ಶ್ರೇಣಿಯ ಸಾಧನೆ ಮಾಡಿದೆ. ಜಿಲ್ಲಾ ಕೇಂದ್ರದ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಕೆ.ರಚನಾ 623 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಇವರು ಗಣಿತ ವಿಷಯದಲ್ಲಿ 98 ಅಂಕ, ಉಳಿದ 5 ವಿಷಯಗಳಲ್ಲಿ ಶೇ 100 ಅಂಕ ಗಳಿಸಿದ್ದಾರೆ.

ಶ್ರೀನಿವಾಸಪುರದ ಜಿ.ಜಿ ವೇಣು ವಿದ್ಯಾಲಯದ ವಿದ್ಯಾರ್ಥಿನಿ ಎಲ್.ದೀಕ್ಷಾ ಇಂಗ್ಲೀಷ್, ಹಿಂದಿ ಮತ್ತು ವಿಜ್ಞಾನ ವಿಷಯದಲ್ಲಿ ಶೇ 100 ಅಂಕಗಳೊಂದಿಗೆ ಒಟ್ಟು 621 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಚಿನ್ಮಯ ವಿದ್ಯಾಲಯದ ಬಿ.ವಿ.ಅಭಿಷೇಕ್ ಕನ್ನಡ, ಹಿಂದಿ ಮತ್ತು ಗಣಿತ ವಿಷಯದಲ್ಲಿ ಶೇ 100 ಅಂಕಗಳೊಂದಿಗೆ ಒಟ್ಟು 620 ಅಂಕ, ಆರ್.ಹೃತ್ವಿಕ್‌ 618 ಅಂಕ ಹಾಗೂ ಆರ್.ಶ್ರೀಶಾ ಒಟ್ಟು 618 ಅಂಕ ಪಡೆದುಕೊಂಡು ನಂತರದ ಸ್ಥಾನ ಹಂಚಿಕೊಂಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮುಳಬಾಗಿಲು ತಾಲ್ಲೂಕಿನ ಘಟ್ಟ ಗ್ರಾಮದ ಪ್ರೌಢ ಶಾಲೆ ವಿದ್ಯಾರ್ಥಿ ಶ್ರೇಯಸ್ 613 ಅಂಕ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ. ಇದೇ ತಾಲ್ಲೂಕಿನ ಹನುಮನಹಳ್ಳಿ ಪ್ರೌಢ ಶಾಲೆಯ ಸುಬ್ರಮಣಿ 611 ಹಾಗೂ ಕೋಲಾರ ತಾಲ್ಲೂಕಿನ ಮದನಹಳ್ಳಿ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ದೀಪಕ್ 611 ಅಂಕ ಗಳಿಸಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.

ಎ ಶ್ರೇಣಿ ಸಾಧನೆ: ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಕೆಜಿಎಫ್ ಮಾತ್ರ ಬಿ ಶ್ರೇಣಿ ಗಳಿಸಿದೆ. ಉಳಿದ 5 ತಾಲ್ಲೂಕುಗಳು ಎ ಶ್ರೇಣಿ ಫಲಿತಾಂಶ ಸಾಧನೆ ಮಾಡಿವೆ. ತಾಲ್ಲೂಕುವಾರು ಗಮನಿಸಿದಾಗ ಜಿಲ್ಲೆಯ ಒಟ್ಟು 354 ಪ್ರೌಢ ಶಾಲೆಗಳ ಪೈಕಿ 244 ಶಾಲೆಗಳು ಶೇ 75ಕ್ಕಿಂತ ಹೆಚ್ಚು ಅಂಕ ಗಳಿಸಿ ಎ ಶ್ರೇಣಿ ಪಡೆದುಕೊಂಡಿವೆ. 83 ಶಾಲೆಗಳು ಬಿ ಶ್ರೇಣಿ ಮತ್ತು 27 ಶಾಲೆಗಳು ಸಿ ಶ್ರೇಣಿ ಸಾಧನೆ ಪಡೆದಿವೆ.

ಶ್ರೇಣಿವಾರು ಫಲಿತಾಂಶ: ಜಿಲ್ಲೆಯ ಒಟ್ಟು ಫಲಿತಾಂಶದ ಶೇ 40ರಷ್ಟು, ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಗಳಿಸಿದ ಒಟ್ಟು ಅಂಕಗಳ ಶೇ 40 ರಷ್ಟು ಹಾಗೂ ಎ+ ಶ್ರೇಣಿ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆಯ ಶೇ 20ರಷ್ಟು ಪ್ರಮಾಣ ಕ್ರೋಢೀಕರಿಸಿ ಶ್ರೇಣಿವಾರು ಜಿಲ್ಲೆಗಳನ್ನು ವಿಭಜಿಸಲಾಗಿದೆ. ಈ ಬಾರಿ ರ್‌್ಯಾಂಕ್‌ ನೀಡದೆ ಗುಣಾತ್ಮಕತೆ ಆಧಾರದ ಮೇಲೆ ಜಿಲ್ಲೆಗಳನ್ನು ವಿಭಜಿಸಲಾಗಿದೆ.

ಶೇ 75ಕ್ಕಿಂತ ಹೆಚ್ಚು ಗುಣಾತ್ಮಕತೆ ಇದ್ದರೆ ಎ ಶ್ರೇಣಿ, ಶೇ 75ಕ್ಕಿಂತ ಕಡಿಮೆ 60ಕ್ಕಿಂತ ಹೆಚ್ಚಿದ್ದರೆ ಬಿ ಶ್ರೇಣಿ, ಶೇ 60ಕ್ಕಿಂತ ಕಡಿಮೆ ಇರುವುದನ್ನು ಸಿ ಶ್ರೇಣಿ ಎಂದು ಪರಿಗಣಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT