ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಸಿ ಬ್ಯಾಂಕ್‌ಗೆ ರಾಜ್ಯ ಮಟ್ಟದ ಗೌರವ

ಸಾಲ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಶ್ರೀನಿವಾಸಗೌಡ ಹೇಳಿಕೆ
Last Updated 11 ನವೆಂಬರ್ 2020, 14:03 IST
ಅಕ್ಷರ ಗಾತ್ರ

ಕೋಲಾರ: ‘ಮಹಿಳೆಯರು ಸಾಲ ಮರು ಪಾವತಿಯಲ್ಲಿ ತೋರುತ್ತಿರುವ ಪ್ರಾಮಾಣಿಕತೆಯಿಂದ ಡಿಸಿಸಿ ಬ್ಯಾಂಕ್ ರಾಜ್ಯ ಮಟ್ಟದ ಗೌರವಕ್ಕೆ ಪಾತ್ರವಾಗಿದೆ. ಮಹಿಳೆಯರು ಉಳಿತಾಯದ ಹಣವನ್ನು ಡಿಸಿಸಿ ಬ್ಯಾಂಕ್‌ನಲ್ಲೇ ಠೇವಣಿಯಿಟ್ಟು ಬ್ಯಾಂಕ್‌ಗೆ ಶಕ್ತಿ ತುಂಬಬೇಕು ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ತಾಲ್ಲೂಕಿನ ಕ್ಯಾಲನೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘವು (ಎಸ್‌ಎಫ್‌ಸಿಎಸ್‌) ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಲ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,‘ಡಿಸಿಸಿ ಬ್ಯಾಂಕ್‌ನಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸಾಲ ಸಿಗುತ್ತದೆ. ಇದಕ್ಕೆ ಅವರಲ್ಲಿನ ಪ್ರಾಮಾಣಿಕತೆ, ಸಾಲ ಪಡೆಯಲು ತೋರುವ ಉತ್ಸಾಹ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಯಾಲನೂರು ಭಾಗಕ್ಕೆ ಒಂದು ಬಾರಿ ಮಾತ್ರ ಬಂದಿದ್ದೆ. ಈ ಭಾಗದಲ್ಲಿ ಅಭಿವೃದ್ಧಿ ಕುಂಠಿತವಾಗಿರುವನ್ನು ನೋಡಿ ಬೇಸರವಾಯಿತು. ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ರಸ್ತೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ’ ಎಂದು ತಿಳಿಸಿದರು.

‘ಕ್ಯಾಲನೂರು ಕ್ರಾಸ್‌ನಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಹಾಳಾಗಿದೆ. ಈ ರಸ್ತೆಯ ಅಭಿವೃದ್ಧಿಗೆ ₹ 8.5 ಕೋಟಿ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗುತ್ತದೆ’ ಎಂದು ಭರವಸೆ ನೀಡಿದರು.

ಬ್ಯಾಂಕ್‌ಗೆ ಶಕ್ತಿ: ‘ಬ್ಯಾಂಕ್‌ ಅನ್ನು ದೇವಾಲಯವೆಂದು ತಿಳಿದು ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಿರುವ ಮಹಿಳೆಯರು ಬ್ಯಾಂಕ್‌ಗೆ ಶಕ್ತಿಯಾಗಿದ್ದಾರೆ. ನಷ್ಟದ ಕಾರಣಕ್ಕೆ ಮುಚ್ಚುವ ಹಂತ ತಲುಪಿದ್ದ ಬ್ಯಾಂಕ್‌ಗೆ ಮರು ಜೀವ ನೀಡಿದ್ದೇವೆ. ಈ ಗೌರವ ಉಳಿಯಲು ಹಗಲಿರಳು ಶ್ರಮಿಸುತ್ತಿದ್ದೇವೆ’ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

‘ಮಹಿಳೆಯರಿಗೆ ಅತಿ ಹೆಚ್ಚು ಸಾಲ ನೀಡಿದ ರಾಜ್ಯದ ಮೊದಲ ಬ್ಯಾಂಕ್ ನಮ್ಮದು. ಸಾಲ ಮರು ಪಾವತಿಯಲ್ಲಿನ ಮಹಿಳೆಯರ ಕಾಳಜಿಯೇ ಇದಕ್ಕೆ ಕಾರಣ. ಮುಂದೆ ಮಹಿಳೆಯರಿಗೆ ಹೆಚ್ಚಿನ ಸಾಲ ನೀಡುವ ಗುರಿಯಿದೆ. ಡಿಸಿಸಿ ಬ್ಯಾಂಕ್‌ಗೆ ಆರ್ಥಿಕ ಶಕ್ತಿ ತುಂಬಿದರೆ ಜಿಲ್ಲೆಯ ಬಡ ಜನರ ಹೆಚ್ಚಿನ ಪ್ರಯೋಜನವಾಗುತ್ತದೆ’ ಎಂದು ಕಿವಿಮಾತು ಹೇಳಿದರು.

ಮನಬಂದಂತೆ ಮಾತು: ‘ಬ್ಯಾಂಕ್ ಸಂಕಷ್ಟದಲ್ಲಿದ್ದಾಗ ಕೈಹಿಡಿಯದವರು ಈಗ ಮನಬಂದಂತೆ ಮಾತನಾಡುತ್ತಾರೆ. ಆಗ ಮಹಿಳೆಯರು, ರೈತರು ಶೂನ್ಯ ಬಡ್ಡಿ, ಕಡಿಮೆ ಬಡ್ಡಿ ಸಾಲ ಮತ್ತು ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾದಾಗ ಈ ಟೀಕಾಕಾರರು ಎಲ್ಲಿಗೆ ಹೋಗಿದ್ದರು?’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಮಾರ್ಮಿಕವಾಗಿ ಪ್ರಶ್ನಿಸಿದರು.

ಕ್ಯಾಲನೂರು ಎಸ್‌ಎಫ್‌ಸಿಎಸ್‌ ಅಧ್ಯಕ್ಷ ರಾಮಾಂಜಿನಪ್ಪ, ನಿರ್ದೇಶಕರಾದ ಆಂಜಿನಪ್ಪ, ಪ್ರಕಾಶ್, ವೆಂಕಟೇಶ್, ಈರಪ್ಪ, ಪಿಳ್ಳಪ್ಪ, ಮುನೇಗೌಡ, ಕಸಬಾ ಸೊಸೈಟಿ ಅಧ್ಯಕ್ಷ ಶ್ರೀನಿವಾಸಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT