ಸೋಮವಾರ, ಸೆಪ್ಟೆಂಬರ್ 20, 2021
27 °C

ಕಾಂಗ್ರೆಸ್‌ಅನ್ನು ಹೊಗಳಿದ ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ: ಪಕ್ಷದ ಮುಖಂಡರ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಶಾಸಕ ಕೆ.ಶ್ರೀನಿವಾಸಗೌಡರಿಗೆ ಕಾಂಗ್ರೆಸ್‌ ಮೇಲೆ ಪ್ರೀತಿಯಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಆ ಪಕ್ಷಕ್ಕೆ ಹೋಗಲಿ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ರಾಜ್ಯ ಕಾರ್ಯದರ್ಶಿ ಸಂತೋಷ್‌ರೆಡ್ಡಿ ಕಿಡಿಕಾರಿದರು.

ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಆಯ್ಕೆಯಾಗಿರುವ ಶ್ರೀನಿವಾಸಗೌಡರು ಈಗ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಶಾಸಕ ರಮೇಶ್‌ಕುಮಾರ್‌ ಪರ ಮಾತನಾಡುತ್ತಿರುವುದು ನಾಚಿಕೆಗೇಡು’ ಎಂದು ಟೀಕಿಸಿದರು.

‘ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಶ್ರೀನಿವಾಸಗೌಡರು ತಮ್ಮ ಮಗನನ್ನು ಹೋಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಏಕೈಕ ಉದ್ದೇಶಕ್ಕೆ ಕಾಂಗ್ರೆಸ್ ಪರ ಮಾತನಾಡುತ್ತಿದ್ದಾರೆ. ಸ್ವಾರ್ಥಕ್ಕಾಗಿ ಕ್ಷೇತ್ರದಲ್ಲಿ ಪಕ್ಷ ಹಾಳು ಮಾಡಲು ಹೊರಟಿರುವ ಅವರಿಗೆ ನೈತಿಕತೆಯಿಲ್ಲ. ಶಾಸಕರು ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಬಾರದು’ ಎಂದು ಹೇಳಿದರು.

‘ಶ್ರೀನಿವಾಸಗೌಡರು ರಾಜಕೀಯವಾಗಿ ಬೆಳೆಯಬೇಕಿದ್ದರೆ ಜೆಡಿಎಸ್‌ ತೊರೆದು ಯಾವುದೇ ಪಕ್ಷಕ್ಕೆ ಹೋಗಲಿ. ಹೋಳೂರು ಕ್ಷೇತ್ರವು ಅವರು ತವರು. ಆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಭದ್ರ ನೆಲೆಯಿದೆ. ಹೀಗಾಗಿ ಶ್ರೀನಿವಾಸಗೌಡರು ಕಾಂಗ್ರೆಸ್‌ಗೆ ಹೋದರೂ ಜೆಡಿಎಸ್‌ಗೆ ಯಾವುದೇ ತೊಂದರೆಯಾಗಲ್ಲ’ ಎಂದರು.

ಪಕ್ಷದ್ರೋಹ: ‘ಶ್ರೀನಿವಾಸಗೌಡರು ಕಾಂಗ್ರೆಸ್‌ ಶಾಸಕ ರಮೇಸ್‌ಕುಮಾರ್ ಪರ ಹೇಳಿಕೆ ನೀಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ಅವರು ಶ್ರೀನಿವಾಸಪುರ ಕ್ಷೇತ್ರದಲ್ಲಿ ರಮೇಶ್‌ಕುಮಾರ್‌ರನ್ನು ಗೆಲ್ಲಿಸಿ ಎಂದು ಹೇಳುವ ಮೂಲಕ ಪಕ್ಷದ್ರೋಹ ಮಾಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಆರೋಪಿಸಿದರು.

‘ಶ್ರೀನಿವಾಸಗೌಡರು ತಮ್ಮ ಗೆಲುವಿಗೆ ರಮೇಶ್‌ಕುಮಾರ್‌ ಕಾರಣ ಎಂದು ಹೇಳುವ ಮೂಲಕ ಜೆಡಿಎಸ್ ಕಾರ್ಯಕರ್ತರ ಶ್ರಮವನ್ನು ಕಡೆಗಣಿಸಿದ್ದಾರೆ. ಶ್ರೀನಿವಾಸಗೌಡರ ಹೇಳಿಕೆ ಬಗ್ಗೆ ಪಕ್ಷದ ವರಿಷ್ಠರ ಮಟ್ಟದಲ್ಲಿ ಚರ್ಚೆ ಆಗಿದೆ. ಸದ್ಯ ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯಕ್ಕೆ ಹಿಂದಿರುಗಿದ ನಂತರ ಚರ್ಚಿಸಿ ಶ್ರೀನಿವಾಸಗೌಡರ ವಿರುದ್ಧ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ’ ಎಂದರು.

ಪಕ್ಷದ ಮುಖಂಡರಾದ ಗೋಪಾಲಗೌಡ, ಶಿವಾರೆಡ್ಡಿ, ಮನೋಹರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು