ಮಂಗಳವಾರ, ಜೂನ್ 28, 2022
23 °C
ಎಪಿಎಂಸಿ ಜಾಗದ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗೆ ಮನವಿ

ಟೊಮೆಟೊ ಆಮದು ನಿಲ್ಲಿಸಿ: ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಹೊರ ರಾಜ್ಯದ ಟೊಮೆಟೊ ಆಮದು ನಿಲ್ಲಿಸಬೇಕು ಮತ್ತು ಜಿಲ್ಲಾ ಕೇಂದ್ರದ ಎಪಿಎಂಸಿಯ ಜಾಗದ ಸಮಸ್ಯೆ ಬಗೆಹರಿಸಬೇಕು’ ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.

ಎಪಿಎಂಸಿ ಸಮಸ್ಯೆಗಳ ಸಂಬಂಧ ಜಿಲ್ಲಾಧಿಕಾರಿ ವೆಂಕಟ್‌ರಾಜಾ ನೇತೃತ್ವದಲ್ಲಿ ಇಲ್ಲಿ ಬುಧವಾರ ನಡೆದ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು. ‘ಜಿಲ್ಲೆಯಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ, ಟೊಮೆಟೊ ವಹಿವಾಟಿಗೆ ಸೂಕ್ತ ಮಾರುಕಟ್ಟೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಹಿಂದಿನ 2 ವರ್ಷಗಳಲ್ಲಿ ಕೋವಿಡ್ ಮತ್ತು ಲಾಕ್‌ಡೌನ್‌ ಕಾರಣಕ್ಕೆ ಟೊಮೆಟೊ ವಹಿವಾಟಿಗೆ ಮಾರುಕಟ್ಟೆ ಇಲ್ಲದೆ ಬೆಲೆ ಕುಸಿದಿತ್ತು. ಜತೆಗೆ ಧಾರಾಕಾರ ಮಳೆ ಹಾಗೂ ಕೀಟಬಾಧೆಯಿಂದ ಬೆಳೆ ನಷ್ಟವಾಗಿ ಆರ್ಥಿಕ ಸಂಕಷ್ಟ ಅನುಭವಿಸಿದ್ದರು’ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹನುಮಯ್ಯ ಹೇಳಿದರು.

‘ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೊಮೆಟೊಗೆ ಮಾರುಕಟ್ಟೆ ಇಲ್ಲದೆ ರೈತರು ತೋಟದಲ್ಲೇ ಬೆಳೆ ನಾಶಪಡಿಸಿದ್ದರು. ಈ ಬಾರಿ ಜಿಲ್ಲೆಯಲ್ಲಿ ಉತ್ತಮ ಬೆಳೆ ಬಂದಿದ್ದು, ಬೆಲೆಯು ಹೆಚ್ಚಳವಾಗಿದೆ. ಆದರೆ, ಎಪಿಎಂಸಿಯಲ್ಲಿನ ಕೆಲ ಮಂಡಿ ಮಾಲೀಕರು ದೆಹಲಿ, ನಾಸಿಕ್‌ನಿಂದ ಟೊಮೆಟೊ ತರಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ವಹಿವಾಟು ಏರುಪೇರಾಗುತ್ತಿದೆ' ಎಂದು ಕಿಡಿಕಾರಿದರು.

‘ಎಪಿಎಂಸಿಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ಬರುತ್ತಿದೆ. ಎಪಿಎಂಸಿ ಅಧಿಕಾರಿಗಳು ಅನಗತ್ಯ ಕಾಮಗಾರಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ಖರ್ಚು ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಅಧಿಕಾರಿಗಳಿಗೆ ರೈತರ ಸಮಸ್ಯೆಯ ಅರಿವಿಲ್ಲ’ ಎಂದು ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

ಸರ್ಕಾರದ ಮೀನಮೇಷ: ‘ಕೋಲಾರ ಎಪಿಎಂಸಿ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಎಂದು ಹೆಸರಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಜಾಗದ ಸಮಸ್ಯೆಯಿಂದ ಪ್ರತಿ ವರ್ಷ ರೈತರಿಗೆ, ದಲ್ಲಾಳಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ನಷ್ಟ ಉಂಟಾಗುತ್ತಿದೆ. ಎಪಿಎಂಸಿಗೆ ಜಮೀನು ನೀಡಿಕೆಗೆ ಸಂಬಂಧಪಟ್ಟ ಕಡತ ಸರ್ಕಾರದ ಮಟ್ಟದಲ್ಲಿದ್ದು, ಸರ್ಕಾರ ಮೀನಮೇಷ ಎಣಿಸುತ್ತಿದೆ’ ಎಂದು ರೈತ ಮುಖಂಡರು ದೂರಿದರು.

‘ಎಪಿಎಂಸಿಗೆ ಜಮೀನು ನೀಡುವಂತೆ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಅಲ್ಲದೇ, ಹೋರಾಟ ಸಹ ಮಾಡಿದ್ದೇವೆ. ಆದರೂ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತವು ಮನವಿಗೆ ಸ್ಪಂದಿಸಿಲ್ಲ. ‌ಜಿಲ್ಲಾ ಉಸ್ತುವಾರಿ ಸಚಿವರ ಸರ್ಕಾರದ ಮೇಲೆ ಒತ್ತಡ ತಂದು ಎಪಿಎಂಸಿಗೆ ಜಮೀನು ಮಂಜೂರು ಮಾಡಿಸಬೇಕು. ಜತೆಗೆ ಮಾರುಕಟ್ಟೆ ಅವ್ಯವಸ್ಥೆ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ವಾರದೊಳಗೆ ಮಾರುಕಟ್ಟೆಯ ಜಾಗದ ಸಮಸ್ಯೆ ಬಗೆಹರಿಸಬೇಕು ಹಾಗೂ ಅವ್ಯವಸ್ಥೆ ಸರಿಪಡಿಸಬೇಕು. ಇಲ್ಲದಿದ್ದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೊಮೆಟೊ ಇಳಿಸಿ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಹೆದ್ದಾರಿ ಬಂದ್‍ ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪರಿಹಾರದ ಭರವಸೆ: ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ‘ಕೋಲಾರ ತಾಲ್ಲೂಕಿನ ಮಂಗಸಂದ್ರದ ಸರ್ವೆ ನಂಬರ್‌ 94 ಮತ್ತು ಮಡಿವಾಳ ಗ್ರಾಮದ ಸರ್ವೆ ನಂಬರ್ 41ರ ಸ್ಥಳ ಪರೀಶೀಲನೆ ಮಾಡಿ ಜಾಗದ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.