ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೀದಿ ನಾಯಿ ಕಾಟ, ನಗರವಾಸಿಗಳಿಗೆ ಪೀಕಲಾಟ

ಮಿತಿ ಮೀರಿ ಬೆಳೆದ ಶ್ವಾನ ಸಂತತಿ: ಹಾದಿ ಬೀದಿಯಲ್ಲಿ ಬೌ ಬೌ ಸದ್ದು
Last Updated 4 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋಲಾರ: ನಗರದಲ್ಲಿ ಶ್ವಾನ ಸಂತತಿ ಮಿತಿ ಮೀರಿ ಬೆಳೆದಿದ್ದು, ಬೀದಿ ನಾಯಿ ಉಪಟಳವು ನಗರವಾಸಿಗಳ ನಿದ್ದೆಗೆಡಿಸಿದೆ. ದಿನ ಬೆಳಗಾದರೆ ರಸ್ತೆಯಲ್ಲಿ ಠಳಾಯಿಸುವ ಶ್ವಾನಗಳ ಹಿಂಡು ಪಾದಚಾರಿಗಳು, ಬೈಕ್‌ ಸವಾರರು, ಮಕ್ಕಳ ಮೇಲೆ ಎರಗುವುದು ಸಾಮಾನ್ಯವಾಗಿದೆ.

ಇದು ಒಂದೆರಡು ವಾರ್ಡ್‌ನ ಸಮಸ್ಯೆಯಲ್ಲ. 35 ವಾರ್ಡ್‌ಗಳಲ್ಲೂ ಬೀದಿ ನಾಯಿ ಕಾಟ ಹೆಚ್ಚಿದೆ. ಸಾಮಾನ್ಯವಾಗಿ ಕಸದ ರಾಶಿ, ಹೋಟೆಲ್‌, ಮಾರುಕಟ್ಟೆಗಳು, ಕಲ್ಯಾಣ ಮಂಟಪಗಳು, ಮಾಂಸ ಮತ್ತು ಮೀನಿನ ಅಂಗಡಿಗಳ ಬಳಿ ನಾಯಿಗಳ ದೊಡ್ಡ ದಂಡೇ ಇರುತ್ತದೆ. ಸಾರ್ವಜನಿಕರು ಗದರಿಸಲು ಮುಂದಾದರೆ ಗುರ್ರೆಂದು ಮೈ ಮೇಲೆ ಎರಗುತ್ತವೆ. ಜನ ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ನಿಶ್ಚಿತ.

ರಸ್ತೆಗಳಲ್ಲಿ ಸಂಚರಿಸುವ ವಾಹನಗಳನ್ನು ಬೆನ್ನಟ್ಟಿ ಬರುವ ಶ್ವಾನ ಪಡೆ ಸೃಷ್ಟಿಸುವ ಅವಾಂತರ ಒಂದೆರಡಲ್ಲ. ವಾಹನದ ಶಬ್ದ ಕೇಳಿದರೆ ಸಾಕು ದುತ್ತನೆ ಮೇಲೆರಗಿ ಸವಾರರನ್ನು ತಬ್ಬಿಬ್ಬು ಮಾಡುತ್ತವೆ. ನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್‌ನಿಂದ ಕೆಳಗೆ ಬಿದ್ದು ಗಾಯಗೊಂಡ ಸವಾರರಿಗೆ ಲೆಕ್ಕವಿಲ್ಲ. ಇನ್ನು ಏಕಾಏಕಿ ವಾಹನಗಳಿಗೆ ಅಡ್ಡ ಹೋಗಿ ಸವಾರರು ನಿಯಂತ್ರಣ ತಪ್ಪಿ ಬೀಳುವಂತೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ನಗರದ ವಿವಿಧೆಡೆ ಬೀದಿ ನಾಯಿಗಳು ಮಕ್ಕಳಿಗೆ ಕಚ್ಚಿದ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿವೆ. ಹೀಗಾಗಿ ಮಹಿಳೆಯರು ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯಪಡುವ ಪರಿಸ್ಥಿತಿ ಇದೆ. ನಗರಸಭೆಯು ಶ್ವಾನ ಸಂತತಿಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದು, ನಗರವಾಸಿಗಳು ಭಯದ ನಡುವೆ ಬದುಕು ಸಾಗಿಸುವಂತಾಗಿದೆ.

ನಿದ್ದೆಗೆ ಭಂಗ: ಹಗಲೆಲ್ಲಾ ದುಡಿದು ಮನೆಗೆ ಬರುವ ಜನರಿಗೆ ಬೀದಿ ನಾಯಿಗಳ ಹಾವಳಿಯಿಂದ ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡುವುದು ಸಹ ಕಷ್ಟವಾಗಿದೆ. ನಾಯಿಗಳು ಬಡಾವಣೆಗಳಲ್ಲಿ ರಾತ್ರಿಯಿಡೀ ಬೊಗುಳುತ್ತಾ ನಿದ್ದೆಗೆ ಭಂಗ ತರುತ್ತವೆ. ಬೀದಿಗೆ ಹೊಸ ನಾಯಿ ಅಥವಾ ಅಪರಿಚಿತ ವ್ಯಕ್ತಿ ಬಂದರೆ ಶ್ವಾನಗಳ ಬೌ ಬೌ ಸದ್ದು ಮೇರೆ ಮೀರುತ್ತದೆ.

ಊರು ಕಾಯುವ ಪೊಲೀಸರಿಗೂ ಬೀದಿ ನಾಯಿಗಳ ಕಿರಿಕಿರಿ ತಪ್ಪಿಲ್ಲ. ಶ್ವಾನ ಪಡೆಯು ಬೈಕ್‌ನಲ್ಲಿ ಗಸ್ತು ತಿರುಗುವ ಪೊಲೀಸ್‌ ಸಿಬ್ಬಂದಿಯನ್ನು ಬೆನ್ನಟ್ಟಿ ದಿಗಿಲು ಬೀಳುವಂತೆ ಮಾಡುತ್ತದೆ. ಬೀದಿ ನಾಯಿ ಕಾಟ ಹೆಚ್ಚಿರುವ ರಸ್ತೆಗಳಲ್ಲಿ ಗಸ್ತು ತಿರುಗಲು ಪೊಲೀಸರೂ ಹೆದರುವ ಪರಿಸ್ಥಿತಿ ಇದೆ.

ನಾಯಿ ಗಣತಿ: ಪ್ರತಿ 5 ವರ್ಷಕ್ಕೊಮ್ಮೆ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆಯು ಪ್ರಾಣಿ ಗಣತಿ ನಡೆಸುತ್ತದೆ. ಅದರಂತೆ ನಾಯಿಗಳನ್ನು ಹಿಡಿದು ಅವುಗಳ ಕಿವಿ ಅಥವಾ ಇನ್ಯಾವುದಾದರೂ ಭಾಗದಲ್ಲಿ ಗುರುತು ಮಾಡುವ ಮೂಲಕ ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಬಳಿಕ ಕಿವಿಗೆ ಸಣ್ಣ ರಂಧ್ರ ಕೊರೆದು ಗುರುತು ಮಾಡಲಾಗುತ್ತದೆ. ಆದರೆ, ನಗರದಲ್ಲಿ ನಾಯಿ ಗಣತಿ ಪ್ರಕ್ರಿಯೆ ಹಳಿ ತಪ್ಪಿದೆ.

ನಗರಸಭೆ ಅಂದಾಜಿನ ಪ್ರಕಾರ ನಗರದಲ್ಲಿ ಸುಮಾರು 30 ಸಾವಿರ ಬೀದಿ ನಾಯಿಗಳಿವೆ. ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ನಾಯಿ ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಆದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಶಸ್ತ್ರಚಿಕಿತ್ಸೆ ದುಬಾರಿ: ಕರ್ನಾಟಕ ಪುರಸಭೆ ಕಾಯ್ದೆಯ ಸೆಕ್ಷನ್‌ 222ರ ಅನ್ವಯ ನಗರಸಭೆಯು ಬೀದಿ ನಾಯಿ ಸಂತತಿಯನ್ನು ನಿಯಂತ್ರಿಸಬೇಕು. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದರೂ ನಿಯಮದ ಪ್ರಕಾರ ಅವುಗಳನ್ನು ಕೊಲ್ಲುವಂತಿಲ್ಲ. ಬದಲಿಗೆ ಕಾಲ ಕಾಲಕ್ಕೆ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ಮಾಡಿಸಿ, 3 ದಿನಗಳ ಕಾಲ ಅವುಗಳ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು.

ಒಂದು ನಾಯಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಸುಮಾರು ₹ 1,200 ವೈದ್ಯಕೀಯ ವೆಚ್ಚವಾಗುತ್ತದೆ. ಇಷ್ಟು ದುಬಾರಿ ಶುಲ್ಕ ಭರಿಸುವುದು ನಗರಸಭೆಗೆ ಕಷ್ಟ. ಜತೆಗೆ ಶಸ್ತ್ರಚಿಕಿತ್ಸೆ ನಂತರ 3 ದಿನಗಳ ಕಾಲ ನಾಯಿಗಳ ಪಾಲನೆಗೆ ಅಗತ್ಯ ಸೌಕರ್ಯವಿಲ್ಲ.

ಹೀಗಾಗಿ ನಗರಸಭೆ ಆಡಳಿತ ಯಂತ್ರವು ನಾಯಿ ಹಿಡಿಯುವ ತಜ್ಞರನ್ನು ಕರೆಸಿ ಆಗಾಗ್ಗೆ ನಾಯಿಗಳನ್ನು ಹಿಡಿಸುತ್ತದೆ. ತಜ್ಞರು ನಾಯಿಗಳನ್ನು ಹಿಡಿದು ನಗರದ ಹೊರವಲಯದ ಅರಣ್ಯ ಪ್ರದೇಶ ಅಥವಾ ಗ್ರಾಮಗಳಲ್ಲಿ ಬಿಟ್ಟು ಹೋಗುತ್ತಾರೆ. ನಂತರ ನಾಯಿಗಳು ದಿನ ಬೆಳಗಾಗುವಷ್ಟರಲ್ಲಿ ನಗರಕ್ಕೆ ವಾಪಸ್‌ ಬರುತ್ತಿವೆ. ಇದರಿಂದ ಸಮಸ್ಯೆ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಸ್ಥಗಿತಗೊಂಡು ವರ್ಷಗಳೇ ಕಳೆದಿದ್ದು, ನಗರವಾಸಿಗಳು ಶ್ವಾನಗಳ ಉಪಟಳದಿಂದ ರೋಸಿ ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT