ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೆಳೆ ಸಾಲದ ವಿಶ್ವಾಸ ಬಲಗೊಳಿಸಿ

ಸಂವಾದದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗೋವಿಂದಗೌಡ ಕಿವಿಮಾತು
Last Updated 9 ಮೇ 2020, 15:46 IST
ಅಕ್ಷರ ಗಾತ್ರ

ಕೋಲಾರ: ‘ಕೊರೊನಾ ಸಂಕಷ್ಟದಲ್ಲಿರುವ ರೈತರಿಗೆ ಸೊಸೈಟಿಗಳು ಆರ್ಥಿಕವಾಗಿ ಶಕ್ತಿ ತುಂಬುವ ತಾಣಗಳಾಗಬೇಕು. ಬೆಳೆ ಸಾಲ ಸಿಗುವುದೆಂಬ ವಿಶ್ವಾಸ ಬಲಗೊಳಿಸಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಕಿವಿಮಾತು ಹೇಳಿದರು.

ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ರೈತರ ಜತೆ ನಡೆದ ಸಂವಾದದಲ್ಲಿ ಮಾತನಾಡಿ, ‘ಸೊಸೈಟಿಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರತಿ ಗ್ರಾಮಕ್ಕೆ ತೆರಳಿ ಬೆಳೆಯಿಡಲು ಹಣವಿಲ್ಲದೆ ಸಂಕಷ್ಟದಲ್ಲಿರುವ ಪ್ರಾಮಾಣಿಕ ರೈತರಿಗೆ ಸಾಲ ಸೌಲಭ್ಯದ ಭರವಸೆ ನೀಡಬೇಕು’ ಎಂದು ತಿಳಿಸಿದರು.

‘ಸೊಸೈಟಿಗಳಿಂದ ಬೆಳೆ ಸಾಲ ಕೊಡದಿದ್ದರೆ ರೈತರು ಹಣಕ್ಕಾಗಿ ಮೀಟರ್ ಬಡ್ಡಿ ದಂಧೆಗೆ ಸಿಲುಕುವ ಅಪಾಯವಿದೆ. ಬ್ಯಾಂಕ್ ಉಳಿಸುವ ಹೊಣೆಯನ್ನು ಸೊಸೈಟಿ ಸಿಬ್ಬಂದಿಯು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ರೈತರು ಕೇಳಿದಷ್ಟು ಸಾಲ ನೀಡಲು ಬ್ಯಾಂಕ್ ಸಿದ್ಧವಿದೆ’ ಎಂದರು.

‘ರೈತರು ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದು ಉಳಿತಾಯದ ಹಣ ಠೇವಣಿ ಇಡಬೇಕು. ಇದರಿಂದ ಮತ್ತಷ್ಟು ರೈತರಿಗೆ ಹಾಗೂ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ನೀಡಲು ಸಹಾಯವಾಗುತ್ತದೆ. ಸೊಸೈಟಿಗಳು ಆರ್ಥಿಕವಾಗಿ ಬಲಗೊಳ್ಳಬೇಕು. ಇದಕ್ಕಾಗಿ ಆರ್ಥಿಕ ಚಟುವಟಿಕೆ ಆರಂಭಿಸಿ. ಚಿಂತಾಮಣಿ ತಾಲ್ಲೂಕಿನ ಕುರಬೂರು ಸೊಸೈಟಿಯನ್ನು ಆದರ್ಶವಾಗಿ ನೋಡಿ’ ಎಂದು ಕಿವಿಮಾತು ಹೇಳಿದರು.

‘ಟೊಮೆಟೊ ಬೆಲೆ ಕುಸಿತದಿಂದ ದಿಕ್ಕು ತೋಚದಂತಾಗಿದೆ. ಹೊಸದಾಗಿ ಬೆಳೆ ಇಡಲು ಹಣವಿಲ್ಲ’ ಎಂದು ರೈತ ಲಕ್ಷ್ಮಣ್ ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ‘ಬ್ಯಾಂಕ್‌ಗೆ ಅರ್ಜಿ ಹಾಕಿ. ಖಂಡಿತ ಸಾಲ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

‘ಈಗಾಗಲೇ ಸಾಲ ಪಡೆದಿರುವ ರೈತರು ಸಾಲದ ಕಂತು ಮರುಪಾವತಿಸಿ. ಉಳ್ಳವರು, ಮಹಿಳಾ ಸಂಘಗಳ ಸದಸ್ಯರು ಕಂತು ಪಾವತಿಸುವ ಮೂಲಕ ಮತ್ತಷ್ಟು ಮಂದಿಗೆ ನೆರವಾಗಲು ಸಹಕರಿಸಿ’ ಎಂದು ಕೋರಿದರು.

ವ್ಯಾಪಾರಿಗಳಿಗೆ ನೆರವಾಗಿ: ‘ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಸೊಸೈಟಿಗಳು ಸಾಲ ನೀಡಬೇಕು. ಬೀದಿ ಬದಿ ಅಥವಾ ಸಣ್ಣ ವ್ಯಾಪಾರಿಗಳಲ್ಲಿ ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರನ್ನು ಗುರುತಿಸಿ ಸಂಕಷ್ಟದ ಸಮಯದಲ್ಲಿ ಅವರಿಗೆ ಆರ್ಥಿಕವಾಗಿ ನೆರವಾಗಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್‌ ತಿಳಿಸಿದರು.

ಸುಗಟೂರು ಸೊಸೈಟಿ ಅಧ್ಯಕ್ಷ ಟಿ.ವಿ.ತಿಮ್ಮರಾಯಪ್ಪ, ಉಪಾಧ್ಯಕ್ಷೆ ರುಕ್ಕಮ್ಮ, ನಿರ್ದೇಶಕರಾದ ವೆಂಕಟರಾಮರೆಡ್ಡಿ, ಎ.ಸಿ.ಭಾಸ್ಕರ್, ಗೋಪಾಲಗೌಡ, ವೆಂಕಟರಾಮಪ್ಪ, ಹನುಮೇಗೌಡ, ಸವಿತಾ ಎನ್.ಶೆಟ್ಟಿ , ವೆಂಕಟಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT